ಅ೦ತರಾಷ್ಟ್ರೀಯ

ಅಂಡಮಾನ್‌ ದ್ವೀಪದಲ್ಲಿ ಅಮೆರಿಕನ್ ಪ್ರಜೆಯ ದುಸ್ಸಾಹಸ ಯಾತ್ರೆ: ಬುಡಕಟ್ಟು ಜನರಿಂದ ಹತ್ಯೆ

ಪೋರ್ಟ್‌ಬ್ಲೇರ್‌: ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ. ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಜನರೇ ಅಲ್ಲಿನ ಮೂಲನಿವಾಸಿ ಬುಡಕಟ್ಟಿನವರಾಗಿದ್ದಾರೆ.

ವರದಿಗಳ ಪ್ರಕಾರ, ಏಳು ಮಂದಿ ಮೀನುಗಾರರು ಅಮೆರಿಕ ಪ್ರಜೆಯ ಸಾಹಸಯಾತ್ರೆಗೆ ನೆರವಾಗಿದ್ದರು. ಅವರನ್ನು ಈಗ ಬಂಧಿಸಲಾಗಿದೆ. ಅಮೆರಿಕನ್ ಪ್ರಜೆಯನ್ನು ಹತ್ಯೆ ಮಾಡಲಾಗಿದ್ದು, ಆತನ ಮೃತದೇಹವನ್ನು ಸ್ಥಳೀಯ ಮೀನುಗಾರರು ಪತ್ತೆಹಚ್ಚಿದ್ದಾರೆ. ಕೊಲೆಯಾದ ಅಮೆರಿಕ ಪ್ರಜೆಯನ್ನು ಜಾನ್ ಅಲೆನ್ ಚೌ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿಯ ಶವವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಮತ್ತು ಸ್ಥಳೀಯಾಡಳಿತ ಪ್ರಯತ್ನಿಸುತ್ತಿದ್ದು, ಬಂಧಿತ ಮೀನುಗಾರರ ಮೇಲೆ ಮೂಲನಿವಾಸಿ ಬಡುಕಟ್ಟುಗಳ ರಕ್ಷಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಸ್ಥಳೀಯ ಪತ್ರಿಕೆ ‘ಅಂಡಮಾನ್ ಶೀಖಾ’ ವರದಿಯ ಪ್ರಕಾರ, ಮೃತ ವ್ಯಕ್ತಿ 27 ವರ್ಷದವನು. ಐದು ದಿನಗಳ ಹಿಂದೆ ಈತ ಬುಡಕಟ್ಟು ಜನರ ಜತೆ ಮಾತನಾಡಲು ಹೋಗಿದ್ದಾನೆ. ಆದರೆ ಮೂಲನಿವಾಸಿಗಳು ಈತನನ್ನು ಶತ್ರುವೆಂದು ತಿಳಿದು ಹತ್ಯೆ ಮಾಡಿದ್ದಾರೆ. ಈ ಬುಡಕಟ್ಟು ಜನರು ಹೊರಜಗತ್ತಿನ ಜತೆ ಸಂಪರ್ಕವನ್ನೂ ಇಟ್ಟುಕೊಳ್ಳುವುದಿಲ್ಲ, ಹೊರಗಿನವರ ಜತೆ ಬೆರೆಯುವುದೂ ಇಲ್ಲ.

ಬುಡಕಟ್ಟು ಸಮೂಹದ ಅಪರಿಚಿತ ವ್ಯಕ್ತಿ ಮೇಲೆ ಕೊಲೆ ಕೇಸು ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆ ಐದು ಬಾರಿ ಜಾನ್ ಈ ದ್ವೀಪಕ್ಕೆ ಭೇಟಿ ನೀಡಿದ್ದ ಎಂದು ಮತ್ತೊಂದು ವರದಿ ಹೇಳಿದೆ. ದ್ವೀಪದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಈತ ಉದ್ದೇಶಿಸಿದ್ದ ಎಂದೂ ಹೇಳಲಾಗಿದೆ. ಆದರೆ ಈ ವರದಿಯನ್ನು ಯಾರೂ ದೃಢೀಕರಿಸಿಲ್ಲ.

About the author

ಕನ್ನಡ ಟುಡೆ

Leave a Comment