ಕ್ರೀಡೆ

ಅಂಪೈರ್‌ ಗಳೊಂದಿಗೆ ವಾಗ್ವಾದ : ಮಹೆಂದ್ರ ಸಿಂಗ್‌ ಧೋನಿ ಗೆ ದಂಡ

ಜೈಪುರ: ಐ.ಪಿ.ಎಲ್‌. ಲೀಗ್‌ ಮುಖಾಮುಖಿಯ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಿ ಅಂಪೈರ್‌ ಗಳೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ಸೂಪರ್‌ ಕಿಂಗ್ಸ್‌ ಕಪ್ತಾನ ಮಹೆಂದ್ರ ಸಿಂಗ್‌ ಧೋನಿ ಅವರಿಗೆ ಪಂದ್ಯದ ಸಂಭಾವನೆಯ ಅರ್ಧದಷ್ಟು ದಂಡ ವಿಧಿಸಲಾಗಿದೆ. ಸಾಮಾನ್ಯವಾಗಿ ಧೋನಿ ಬ್ಯಾಟಿಂಗ್‌ ಸಮಯದಲ್ಲಾಗಲಿ ಮೈದಾನದಲ್ಲಿ ಕೀಪಿಂಗ್‌ ನಡೆಸುವ ಸಂದರ್ಭದಲ್ಲಾಗಲಿ ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿತ್ವದವರಲ್ಲ. ಹೀಗಾಗಿಯೇ ಧೋನಿ ಅವರನ್ನು ‘ಕ್ಯಾಪ್ಟನ್‌ ಕೂಲ್‌’ ಎಂದೇ ಕರೆಯಲಾಗುತ್ತದೆ.

ಆದರೆ ಗುರುವಾರದ ಲೀಗ್‌ ಮುಖಾಮುಖಿ ವೇಳೆ ಅಂತಿಮ ಓವರ್‌ ಚೆನ್ನೈ ಪಾಲಿಗೆ ನಿರ್ಣಾಯಕವಾಗಿತ್ತು. ರಾಜಸ್ಥಾನ ರಾಯಲ್‌ ತಂಡದ ಬೌಲರ್‌ ಬೆನ್‌ ಸ್ಟೋಕ್‌ ಎಸೆದ ಅಂತಿಮ ಓವರ್‌ ನ ಎಸೆತವೊಂದು ಬ್ಯಾಟ್ಸ್‌ ಮನ್‌ ನ ಸೊಂಟಕ್ಕಿಂತ ಮೇಲ್ಮಟ್ಟದಲ್ಲಿದ್ದ ಕಾರಣ ಮುಖ್ಯ ಅಂಪೈರ್‌ ಉಲ್ಲಾಸ್‌ ಗಂಧೆ ಅವರು ನೋ ಬಾಲ್‌ ಸಿಗ್ನಲ್‌ ನೀಡುತ್ತಾರೆ ಆದರೆ ಅದನ್ನು ಸೈಡ್‌ ಅಂಪೈರ್‌ ಬ್ರೂಸ್‌ ಆಕ್ಸೆನ್‌ ಫೋರ್ಡ್‌ ಅವರು ಅಮಾನ್ಯ ಮಾಡುತ್ತಾರೆ.

ಅಂಪೈರ್‌ ಗಳ ಈ ಗೊಂದಲದ ನಿರ್ಧಾರದಿಂದ ವಿಚಲಿತರಾದ ಧೋನಿ ಮೈದಾನಕ್ಕೆ ಪ್ರವೇಶಿಸಿ ಅಂಪೈರ್‌ ಗಳ ಬಳಿ ಮಾತನಾಡುತ್ತಾರೆ. ಸಮಯದಲ್ಲಿ ಚೆನ್ನೈ ಗೆಲುವಿಗೆ ಎರಡು ಎಸೆತಗಳಲ್ಲಿ ನಾಲ್ಕು ರನ್‌ ಅವಶ್ಯಕತೆ ಇರುತ್ತದೆ. ಅಂತಿಮ ಓವರ್‌ ನ ಐದನೇ ಎಸೆತ ಸಕ್ರಮವಾದ ಕಾರಣ ಕೊನೆಯ ಎಸೆತೆದಲ್ಲಿ ನಾಲ್ಕು ರನ್‌ ತೆಗೆಯುವ ಅನಿವಾರ್ಯತೆ ಸೂಪರ್‌ ಕಿಂಗ್ಸ್‌ ಗೆ ಬರುತ್ತದೆ. ಆದರೆ ಆ ಎಸೆತವನ್ನು ಸಿಕ್ಸರ್‌ ಗೆ ಅಟ್ಟುವ ಮೂಲಕ ಮಿಚೆಲ್‌ ಸ್ಯಾಟೆ°ರ್‌ ಅವರು ಚೆನ್ನೈಗೆ ಗೆಲುವು ತಂದುಕೊಡುತ್ತಾರೆ.

ಮೈದಾನಕ್ಕೆ ಪ್ರವೇಶಿಸಿ ಅಂಪೈರ್‌ ಗಳೊಂದಿಗೆ ಚರ್ಚೆಗಿಳಿಯುವ ಮೂಲಕ ಐ.ಪಿ.ಎಲ್‌. ನಿಯಮಗಳನ್ನು ಮೀರಿರುವ ಕಾರಣಕ್ಕಾಗಿ ಧೋನಿ ಅವರಿಗೆ ಅವರ ಪಂದ್ಯ ಸಂಭಾವನೆಯ ಅರ್ಧದಷ್ಟು ದಂಡ ವಿಧಿಸಲಾಗಿದೆ ಎಂದು ಲೀಗ್‌ ಹೆಳಿಕೆಯಲ್ಲಿ ತಿಳಿಸಲಾಗಿದೆ.

About the author

ಕನ್ನಡ ಟುಡೆ

Leave a Comment