ಸಿನಿ ಸಮಾಚಾರ

ಅಂಬಿ ನೋಡಲು ಬಾರದೆ, ಟ್ವಿಟರ್’ನಲ್ಲಿ ನಟಿ ರಮ್ಯ ಸಂತಾಪ: ಅಭಿಮಾನಿಗಳ ಕಿಡಿ

ಬೆಂಗಳೂರು: ನಟ ಅಂಬರೀಷ್ ಅವರ ನಿಧನದ ಸುದ್ದಿ ತಿಳಿದಿದ್ದರೂ, ಸ್ವತಃ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಅಂತಿಮ ದರ್ಶನಕ್ಕೆ ಬಾರದೆ, ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವುದಕ್ಕೆ ಅಭಿಮಾನಿಗಳ ವಲಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಅಂಬರೀಷ್ ಅವರನ್ನು ಅಂಬರೀಷ್ ಅಂಕಲ್ ಎಂದೇ ಆಪ್ತತೆ, ಅಭಿಮಾನ ತೋರುತ್ತಿದ್ದ ರಮ್ಯಾ ದೆಹಲಿಯಲ್ಲಿಯೇ ಇದ್ದರೂ ಭಾನುವಾರ ಬೆಂಗಳೂರಿಗೆ ಬಂದು ಅಂಬರೀಷ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶಕ್ಕೆ ಬಾರದಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. ಇಡೀ ಕನ್ನಡ ಚಿತ್ರರಂಗದ ದಂಡೇ ಭಾನುವಾರ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಅಗಲಿದ ಚಿತ್ರರಂಗದ ಧೃವತಾರೆಗೆ ಅಂತಿಮ ವಿದಾಯ ಸಲ್ಲಿಸಿತು. ಆದರೆ, ರಮ್ಯಾ ಮಾತ್ರ ಬರಲಿಲ್ಲ. ಬದಲಿಗೆ ಟ್ವಿಟರ್ ನಲ್ಲಿ ಅಂಬರೀಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸುಮ್ಮನಾಗಿದ್ದಾರೆ. ಅಭಿಮಾನಿಗಳ ಆಕ್ರೋಶದ ಹಿನ್ನಲೆಯಲ್ಲಿ ಸೋಮವಾರ ಮಂಡ್ಯ ಅಥವಾ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸಂಸ್ಕಾರದಲ್ಲಿ ರಮ್ಯಾ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದ ರಮ್ಯಾ ಅವರು, ಅಂಬರೀಷ್ ಅಂಕಲ್ ಅಗಲಿಕೆ ತುಂಬಾ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅವರ ನೆನಪು ಚಿರಸ್ಥಾಯಿ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment