ರಾಜ್ಯ ಸುದ್ದಿ

ಅಂಬಿ ಹೆಸರಲ್ಲಿ ಮೈಸೂರಲ್ಲಿ ಫಿಲ್ಮ್​ ಸಿಟಿ ನಿರ್ಮಾಣ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ, ಅಂಬರೀಷ್​ ಆಸೆಯಂತೆ ಮೈಸೂರಿನಲ್ಲೇ ಫಿಲ್ಮ್​ ಸಿಟಿ ನಿರ್ಮಾಣ ಮಾಡಿ, ಅವರ ಹೆಸರಿಡಲಾಗುವುದು. ಹಾಗೇ ರಾಮನಗರದಲ್ಲಿ ಫಿಲ್ಮ್​ ಯೂನಿವರ್ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.

ಕನ್ನಡ ಚಿತ್ರರಂಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ದಿವಂಗತ ನಟ ಅಂಬರೀಷ್​​ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ನೂರಾರು ಎಕರೆ ಜಾಗ ನೀಡಿದ್ದಾರೆ. ಅವರ ಮನವಿಯಂತೆ, ಅಂಬರೀಷ್​ ಆಸೆಯಂತೆ ಅಲ್ಲಿಯೇ ಫಿಲ್ಮ್​ ಸಿಟಿ ನಿರ್ಮಾಣ ಮಾಡಿ ಅಂಬಿ ಹೆಸರಿಡೋಣ ಎಂದರು. ಹಾಗೇ ನಟ ವಿಷ್ಣುವರ್ಧನ್ ಹೆಸರಿಗೂ ಗೌರವ ಸಿಗುವಂತೆ ಮಾಡುತ್ತೇವೆ ಎಂದು ತಿಳಿಸಿದರು.

ಅಂಬಿ ಒರಟುತನ ಮಂಡ್ಯ ಜಿಲ್ಲೆಯಿಂದಲೇ ಬಂದಿತ್ತು: ಅಂಬಿ ನನಗೆ ಸ್ನೇಹಿತ ಹಾಗೂ ಅಣ್ಣನ ರೀತಿ ಇದ್ದರು. ಅವರ ನಿಧನದ ವಿಷಯ ತಿಳಿದಾಕ್ಷಣ ಆಸ್ಪತ್ರೆ ಭೇಟಿ ನೀಡಿದ್ದೆ. ಅವರು ಸ್ವಚ್ಛ ಮನಸ್ಸನ್ನು ಹೊಂದಿದ್ದರು. ಹೀಗಾಗಿ ಅವರ ವಿಧಿವಶದ ನಂತರ ಕಾರ್ಯ ಸುಗಮವಾಗಿ ನಡೆಯಲು ಸಾಧ್ಯವಾಯಿತು. ಅಂಬಿ ಮಾತಿನಲ್ಲಿ ಒರಟಿದ್ದರೂ ಮನಸ್ಸು ಮೃದುವಿತ್ತು. ಅವರ ಒರಟುತನ ಮಂಡ್ಯ ಜಿಲ್ಲೆಯಿಂದ ಬಂದಿತ್ತು. ಮಂಡ್ಯದಲ್ಲಿ ಮೂರ್ನಾಲ್ಕು ಲಕ್ಷ ಜನರಿಂದ ಅಂತಿಮದರ್ಶನ ನಡೆದಿದ್ದು, ಅಭಿಮಾನಿಗಳು ಶಾಂತ ರೀತಿಯಲ್ಲಿ ನಡೆದುಕೊಂಡರು. ಅವರಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂದರು.

ಅಂಬಿ ಹುಡುಗಾಟದ ಸ್ವಭಾವದವರು: ಅಂಬಿ​ಗೆ ದೇಶ-ವಿದೇಶಗಳಲ್ಲಿ ಬಹಳ ಸ್ನೇಹಿತರಿದ್ದರು. ಅವರು ಹುಡುಗಾಟದ ಸ್ವಭಾವದವರಾಗಿದ್ದರು. ಅವರು ಅಧಿಕಾರಕ್ಕಾಗಿ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಅಂಬಿ ನಿಧನಕ್ಕೂ ಒಂದು ವಾರದ ಮುಂಚೆ ಫೋನ್ ಮಾಡಿ ನನ್ನ ಆರೋಗ್ಯ ಬಗ್ಗೆ ವಿಚಾರಿಸಿದ್ದರು.​ ನಿನ್ನ ಆರೋಗ್ಯದ ಬಗ್ಗೆಯೂ ನೋಡಿಕೊಳ್ಳಬೇಕು ಎಂದಿದ್ದೆ. ಅಂಬಿ ಯಾವಾಗಲೂ ನನ್ನ ಹೃದಯಲ್ಲಿ ಚಿರಕಾಲ ಇರುತ್ತಾರೆ ಎಂದು ಸ್ಮರಿಸಿದರು.

ಅಂಬಿಯನ್ನು ಅಭಿಷೇಕ್​ನಲ್ಲಿ ನೋಡೋಣ: ಚಿತ್ರರಂಗದ ಹಲವು ಸಮಸ್ಯೆಗಳನ್ನು ಅಂಬಿ ಬಗೆಹರಿಸುತ್ತಿದ್ದರು. ಅಂಬರೀಷ್ ತುಂಬ ಅಪರೂಪದ ವ್ಯಕ್ತಿಯಾಗಿದ್ದರು. ಅವರ ಮಗ ಅಭಿಷೇಕ್ ತಂದೆಯ ಗುಣಗಳನ್ನು ಅಳವಡಿಸಿಕೊಂಡಿದ್ದಾನೆ. ಅಂಬಿ ಹೆಸರನ್ನು ಅಭಿಷೇಕ್​ ಉಳಿಸಿಕೊಂಡು ಹೋಗುತ್ತಾನೆ. ಅಭಿಷೇಕ್​ನಲ್ಲಿ ನಾವು ಅಂಬರೀಷ್ ಅವರನ್ನು ನೋಡೋಣ. ನನ್ನ ಮಗನ ಜತೆ ಅಂಬಿ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಅದಕ್ಕಾಗಿ ತೆಲುಗಿನ ‘ರೆಬೆಲ್​’​ ಸಿನಿಮಾದ ರೈಟ್ಸ್​ ತೆಗೆದುಕೊಂಡಿದ್ದೆ ಎಂದು ತಿಳಿಸಿದರು. 

About the author

ಕನ್ನಡ ಟುಡೆ

Leave a Comment