ದೇಶ ವಿದೇಶ

ಅಣ್ವಸ್ತ್ರ, ಕ್ಷಿಪಣಿ ಪರೀಕ್ಷೆ ಅಂತ್ಯ: ಉತ್ತರ ಕೊರಿಯಾ

ಸೋಲ್‌: ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸಿರುವುದಾಗಿ ಉತ್ತರ ಕೊರಿಯಾ ಶನಿವಾರ ಪ್ರಕಟಿಸಿದೆ.

ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಸಂಬಂಧ ಪ್ಯೋಂಗ್ಯಾಂಗ್‌, ಸೋಲ್‌ ಹಾಗೂ ವಾಷಿಂಗ್ಟನ್‌ ನಡುವೆ ನಡೆಯಲಿರುವ ಮಾತುಕತೆಗೂ ಮುನ್ನವೇ ಉತ್ತರ ಕೊರಿಯಾ ಈ ನಿರ್ಧಾರ ಪ್ರಕಟಿಸಿದೆ. ಪರಮಾಣು ಪರೀಕ್ಷಾ ವಲಯಗಳನ್ನೂ ಮುಚ್ಚುವ ಯೋಚನೆಯನ್ನೂ ವ್ಯಕ್ತಪಡಿಸಿದೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳ ವಿರೋಧ ಮತ್ತು ಎಚ್ಚರಿಕೆ ನಡುವೆಯೂ ಸಾಲಾಗಿ ಪರಮಾಣು ಕ್ಷಿಪಣಿ ಹಾಗೂ ಮೂರು ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸಿತ್ತು.

ನವೆಂಬರ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಂಗ್‌ ಉನ್‌ ಪರಮಾಣು ಶಕ್ತಿ ಪರೀಕ್ಷೆ ಸಂಪೂರ್ಣ ಎಂದು ಘೋಷಿಸಿದ್ದರು. ಶನಿವಾರ ಉತ್ತರ ಕೊರಿಯಾದ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಉತ್ತರ ಕೊರಿಯಾ ಮತ್ತು ವಿಶ್ವಕ್ಕೆ ಇದು ತುಂಬಾ ಒಳ್ಳೆಯ ಸುದ್ದಿ–ಉತ್ತಮ ಬೆಳವಣಿಗೆ. ನಮ್ಮ ಮುಂದಿನ ಸಭೆಗೆ ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟಿಸಿದ್ದಾರೆ. ದೇಶದ ಆರ್ಥಿಕತೆವೃದ್ಧಿಸಲು ಮುಂದಾಗಿರುವ ಉತ್ತರ ಕೊರಿಯಾ ತನ್ನ ಸಮೀಪ ರಾಷ್ಟ್ರಗಳೊಂದಿಗೆ ಬಾಂಧವ್ಯ ಗಟ್ಟಿಗೊಳಿಸುವ ಪ್ರಯತ್ನ ನಡೆಸಿದೆ. ಕೊರಿಯಾ ಪೆನಿನ್ಸುಲಾದಲ್ಲಿ ಶಾಂತಿ ಕಾಪಾಡಲು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆಗೆ ಮುಂದಾಗಿದೆ. ಮೇ ಅಥವಾ ಜೂನ್‌ನಲ್ಲಿ ಟ್ರಂಪ್‌ ಮತ್ತು ಕಿಮ್‌ ಭೇಟಿ ನಡೆಯುವ ಸಾಧ್ಯತೆಯಿದೆ.

About the author

ಕನ್ನಡ ಟುಡೆ

Leave a Comment