ತಂತ್ರಜ್ಞಾನ

ಅತಿ ಭಾರದ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್, ಡಿ.5 ರಂದು ಉಡಾವಣೆ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದು, ದೇಶದ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂದೇ ಕರೆಯಲಾಗುತ್ತಿರುವ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
5,870 ಕೆ.ಜಿ.ತೂಕದ ಈ ಜಿಸ್ಯಾಟ್ ಉಪಗ್ರಹ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದ್ದು, ಉಪಗ್ರಹ 12-14 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ವೇಗದ ಇಂಟರ್ ನೆಟ್ ಸೌಲಭ್ಯ ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಭಾರತದಲ್ಲಿ ಈ ಉಪಗ್ರಹ ಕೀ ಪ್ಲೇಯರ್ ಪಾತ್ರ ನಿರ್ವಹಿಸಲಿದ್ದು,  ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಭಾರತದಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿದೆ.

ಅಂತೆಯೇ ಅಂತರಿಕ್ಷದಲ್ಲಿ ಸುಧೀರ್ಘ ಅಂದರೆ 15 ವರ್ಷಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.  ಯೂರೋಪಿಯನ್ ಮೂಲದ ಉಪಗ್ರಹ ಉಡಾವಣಾ ಸಂಸ್ಥೆ ಯುರೋಪಿಯನ್ ಸ್ಪೇಸ್ ಟ್ರಾನ್ಸ್ ಪೋರ್ಟರ್ ಏರಿಯಾನ್ ಸ್ಪೇಸ್ ಸಂಸ್ಥೆ ಇದೇ  ಡಿಸೆಂಬರ್ ರಂದು ಭಾರತೀಯ ಕಾಲಮಾನ ಮುಂಜಾನೆ 3:23ಕ್ಕೆ ಉಡಾವಣೆ ಮಾಡುವುದಾಗಿ ಹೇಳಿದೆ.ಇನ್ನು ಏರಿಯಾನ್ 5 ವಾಹನ ಭಾರತದ ಜಿಸ್ಯಾಟ್ 11 ನೊಂದಿಗೆ ಕೊರಿಯಾದ ಜಿಯೋ ಕೋಮ್ ಸ್ಯಾಟ್ 2ಎ ಉಪಗ್ರಹವನ್ನೂ ಕೂಡ ನಭಕ್ಕೆ ಕೊಂಡೊಯ್ದು ಕಕ್ಷೆಗೆ ಸೇರಿಸುವ ಕಾರ್ಯ ಮಾಡಲಿದೆ. ಜಿಯೋ ಕೋಮ್ ಸ್ಯಾಟ್ 2ಎ ಹವಾಮಾನ ಮತ್ತು ಬಾಹ್ಯಾಕಾಶ ಹವಾಮಾನ ಮೇಲ್ವಿಚಾರಣೆ ಮಾಡುವ ಉಪಗ್ರಹವಾಗಿದೆ.
ಈ ಹಿಂದೆ ಸಾಕಷ್ಟು ಬಾರಿ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಇಸ್ರೋ ಮುಂದಾಗಿತ್ತಾದರೂ ತಾಂತ್ರಿಕ ಕಾರಣಗಳಿಂದಾಗಿ ಅದು ಪದೇ ಪದೇ ಮುಂದೂಡಲ್ಪಟ್ಟಿತ್ತು. ಕಳೆದ ಏಪ್ರಿಲ್ ನಲ್ಲಿ ಜಿಸ್ಯಾಟ್ 6ಎ ಉಪಗ್ರಹ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಸಂವಹನ ಉಪಗ್ರಹ ಜಿಸ್ಯಾಟ್ 11 ಉಪಗ್ರಹ ಉಡಾವಣೆಯನ್ನು ಮುಂದೂಡಲಾಗಿತ್ತು. ಮೇ 25ರಂದು ಫ್ರಾನ್ಸ್​ನ ಫ್ರೆಂಚ್ ಗಯಾನಾ ಕೌರು ಉಪಗ್ರಹ ಉಡಾವಣಾ ಕೇಂದ್ರದಿಂದ ಜಿಸ್ಯಾಟ್ 11 ಉಪಗ್ರಹ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಏರಿಯನ್​ಸ್ಪೇಸ್ ಕಂಪನಿ ತಯಾರಿಸಿರುವ ಏರಿಯನ್ 5 ರಾಕೆಟ್ ಮೂಲಕ ಉಡಾವಣೆಯಾಗುವುದಿತ್ತು.

About the author

ಕನ್ನಡ ಟುಡೆ

Leave a Comment