ರಾಜಕೀಯ

ಅತೃಪ್ತರ ಬಾಯಿಗೆ ಬೀಗ ಹಾಕಿ: ಸಂಪುಟ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಹೇಳಿದ ಮುಖ್ಯಮಂತ್ರಿ

ಬೆಂಗಳೂರು: ಮೈತ್ರಿ ಸರಕಾರ ಸುಗಮವಾಗಿ ನಡೆಯಬೇಕಿದ್ದರೆ ಮಾಜಿ ಸಚಿವ ಎ.ಮಂಜು, ಶಾಸಕ ಡಾ.ಸುಧಾಕರ್‌ ಸೇರಿದಂತೆ ಕಾಂಗ್ರೆಸ್‌ನ ಅತೃಪ್ತರ ಬಾಯಿಗೆ ಬೀಗ ಹಾಕುವ ಕೆಲಸ ತಕ್ಷಣವೇ ಆಗಬೇಕು ಎಂದು ಸಂಪುಟ ಸಭೆಯಲ್ಲೇ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ತೋಡಿಕೊಂಡಿದ್ದಾರೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್‌ ಹಾಗೂ ಕಾಂಗ್ರೆಸ್‌ನ ಹಿರಿಯ ಸಚಿವರನ್ನು ಉದ್ದೇಶಿಸಿ ಹೀಗೆ ಹೇಳಿರುವ ಅವರು, ಕಾಂಗ್ರೆಸ್‌ನ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡವರು ಪದೇ ಪದೆ ಸಭೆ ನಡೆಸುತ್ತಿದ್ದಾರೆ. ಇದರಿಂದ ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂಬ ಕೆಟ್ಟ ಸಂದೇಶ ಹೋಗುತ್ತಿದೆ. ಯಾವುದೇ ಶಾಸಕರು, ಮುಖಂಡರಿಗೆ ಅಸಮಾಧಾನವಿದ್ದರೆ ನಾಲ್ಕು ಗೋಡೆಯ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಈ ಸಂಬಂಧ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು ಎನ್ನಲಾಗಿದೆ.

ಸಂಕ್ರಾಂತಿ ಬಳಿಕ ಸಮನ್ವಯ : ಸಂಕ್ರಾಂತಿ ಬಳಿಕ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು. ಉಭಯ ಪಕ್ಷಗಳಿಂದಲೂ ಯಾವುದೇ ಗೊಂದಲವಿದ್ದರೆ ಸಭೆಯಲ್ಲಿ ಚರ್ಚಿಸಿ ಇತ್ಯರ್ಥ ಪಡಿಸಿಕೊಳ್ಳಬಹುದು. ಅದನ್ನು ಬಿಟ್ಟು ಈ ರೀತಿ ಸಭೆ ನಡೆಸಿ ಭಿನ್ನ ದಾರಿ ತುಳಿಯದಂತೆ ಶಾಸಕರಿಗೆ ಕಟ್ಟಪ್ಪಣೆ ಮಾಡಬೇಕೆಂದು ಸಿಎಂ ಹೇಳಿದರೆಂದು ತಿಳಿದು ಬಂದಿದೆ.

ಮೂವರ ನೇಮಕವಿಲ್ಲ : ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ವಿ.ಮುನಿಯಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ.ಸುಧಾಕರ್‌ ಹಾಗೂ ಕೆಆರ್‌ಡಿಸಿಎಲ್‌ಗೆ ವೆಂಕಟರಮಣಯ್ಯ ಅವರನ್ನು ನೇಮಿಸಲು ಸಾಧ್ಯವಿಲ್ಲವೆಂದು ಸಿಎಂ ಸಂಪುಟ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇವರ ನೇಮಕಕ್ಕೆ ಅಂಕಿತ ಹಾಕುವಂತೆ ಡಿಸಿಎಂ ಜಿ.ಪರಮೇಶ್ವರ್‌ ಮನವಿ ಮಾಡಿಕೊಂಡರು. ಆದರೆ, ಇದನ್ನು ಸಿಎಂ ತಳ್ಳಿಹಾಕಿದರು ಎಂದು ಮೂಲಗಳು ಹೇಳುತ್ತವೆ.

ತನಿಖೆ ಬಳಿಕ ಮುಂದಿನ ಕ್ರಮ : ಸಚಿವ ಪುಟ್ಟರಂಗಶೆಟ್ಟಿ ಸಿಬ್ಬಂದಿಯಿಂದ ನಗದು ವಶಪಡಿಸಿಕೊಂಡ ಪ್ರಕರಣದ ಬಗ್ಗೆಯೂ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಎಸಿಬಿ ತನಿಖೆ ನಡೆಯುತ್ತಿರುವುದರಿಂದ ಈ ವಿಚಾರವಾಗಿ ಮಾತುಕತೆ ಬೇಡ. ತನಿಖೆ ಬಳಿಕ ಸೂಕ್ತ ಕ್ರಮ ಕೈಗೊಂಡರಾಯಿತು ಎಂದು ಡಿಸಿಎಂ ಹೇಳಿದರು ಎನ್ನಲಾಗಿದೆ. ಸಂಪುಟ ಸಭೆಗೆ ಸಚಿವ ಪುಟ್ಟರಂಗ ಶೆಟ್ಟಿ ತಡವಾಗಿ ಆಗಮಿಸಿದರು.

About the author

ಕನ್ನಡ ಟುಡೆ

Leave a Comment