ರಾಜಕೀಯ

ಅಧಿಕಾರ, ಹಣದಾಸೆಗೆ ಉಮೇಶ್ ಜಾಧವ್ ತಮ್ಮನ್ನು ತಾವು ಮಾರಿಕೊಂಡಿದ್ದಾರೆ: ದಿನೇಶ್ ಗುಂಡೂರಾವ್

 

ಬೆಂಗಳೂರು: ಪಕ್ಷಕ್ಕೆ ರಾಜಿನಾಮೆ ನೀಡುವ ಮೂಲಕ ಉಮೇಶ್ ಜಾಧವ್ ಅವರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಅತ್ತ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ರೆಬೆಲ್ ಶಾಸಕ ಉಮೇಶ್ ಜಾಧವ್ ಸ್ಪೀಕರ್ ರಮೇಶ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಉಮೇಶ್ ಜಾಧವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಉಮೇಶ್ ಜಾಧವ್ ರನ್ನು ನಾನು ಸಜ್ಜನ ರಾಜಕಾರಣಿ ಎಂದು ಭಾವಿಸಿದ್ದೆ. ಆದರೆ ಅವರೂ ಕೂಡ ಅಧಿಕಾರದಾಸೆ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಪಕ್ಷದ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಭಾವಿಸಿರಲಿಲ್ಲ. ಉಮೇಶ್ ಜಾಧವ್ ರನ್ನು ಬೆಳೆಸಿದ್ದೇ ಕಾಂಗ್ರೆಸ್ ಪಕ್ಷ. ಪಕ್ಷ ಅವರಿಗೆ ಎಲ್ಲವನ್ನೂ ನೀಡಿದೆ. ಆದರೆ ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇಂತಹ ಅಧಿಕಾರದಾಸೆಗೆ ತಮ್ಮನ್ನು ತಾವು ಮಾರಿಕೊಳ್ಳುವ ರಾಜಕಾರಣಿಗಳನ್ನು ಜನ ತಿರಸ್ಕರಿಸಬೇಕು. ಮುಂದಿನ ದಿನಗಳಲ್ಲಿ ಉಮೇಶ್ ಜಾಧವ್ ಅವರೇ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸಲಿದ್ದಾರೆ. ಜನ ಖಂಡಿತಾ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು
ಟೀಕಿಸಿದರು.
ಅಂತೆಯೇ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹಿರಿಯ ನಾಯಕರು. ಕರ್ನಾಟಕ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಹೈದರಾಬಾದ್ ಕರ್ನಾಟಕದ ಜನತೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆರ್ಟಿಕಲ್ 371ಜೆ ಜಾರಿಯಾಗಿದೆ ಎಂದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೇ ಅವರೇ ಕಾರಣ. ಇಂತಹ ನಾಯಕರನ್ನು ಉಮೇಶ್ ಜಾಧವ್ ಅವರು ಕೇವಲ ಲೋಕಸಭಾ ಟಿಕೆಟ್ ಗಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

About the author

ಕನ್ನಡ ಟುಡೆ

Leave a Comment