ರಾಜ್ಯ ಸುದ್ದಿ

ಅಧಿಕೃತ ಬಂಗಲೆಯಿಂದ ಹಣ ಪೋಲು: ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ

ಬೆಂಗಳೂರು: ಮೇಯರ್ ಗಳಿಗೆ ಪ್ರತ್ಯೇಕ ಅಧಿಕೃತ ಬಂಗಲೆಗಳ ಅಗತ್ಯವಿರುವುದಿಲ್ಲ ಎಂದು ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಮಂಗಳವಾರ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಮೇಯರ್ ಗಳಿಗೆ ಪ್ರತ್ಯೇಕ ಬಂಗಲೆಯ ಅಗತ್ಯವಿಲ್ಲ. ಪ್ರತ್ಯೇಕ ಬಂಗಲೆ ವ್ಯರ್ಥ ಹಣವಷ್ಟೇ ಎಂದು ಹೇಳಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಮೇಯರ್ ಆಗಿದ್ದ ಸಂಪತ್ ರಾಜ್ ಅವರು, ಮುಖ್ಯಮಂತ್ರಿಗಳ ಅಧಿಕೃತ ನಿವಾಸಿವಿರುವ ಕೃಷ್ಣಾ ಬಳಿಯೇ ಪ್ರತ್ಯೇಕ ಅಧಿಕೃತ ಬಂಗಲೆ ಬೇಕೆಂದು ಕೇಳಿದ್ದರು. ಸಭೆ ನಡೆಸಲು ಹಾಗೂ ಜನರೊಂದಿಗೆ ಮಾತುಕತೆ ನಡೆಸಲು, ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಬೇಕೆಂದು ಕೇಳಿದ್ದರು. ಇದರಂತೆ ಮಾರ್ಚ್ ನಲ್ಲಿ ಮಂಡನೆ ಮಾಡಲಾಗಿದ್ದ ಬಿಬಿಎಂಪಿ ಬಜೆಟ್ ನಲ್ಲಿಯೂ ರೂ.5 ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಇದೀಗ ಈ ಹಣವನ್ನು ಖರ್ಚು ಮಾಡಲು ಗಂಗಾಂಬಿಕೆಯವರು ನಿರಾಕರಿಸಿದ್ದಾರೆ.
ಮೇಯರ್ ಅಧಿಕಾರಾವಧಿ ಕೇವಲ ಒಂದು ವರ್ಷವಷ್ಟೇ. ಹೀಗಾಗಿ ಬೆಂಗಳೂರಿನಲ್ಲಿಯೇ ನೆಲೆಸಿರುವ ಮೇಯರ್ ಗಳಿಗೆ ಪ್ರತ್ಯೇಕ ಬಂಗಲೆಗಳ ಅಗತ್ಯವಿರುವುದಿಲ್ಲ. ಬಂಗಲೆಗಳಿಗೆ ಈ ಹಣವನ್ನು ಖರ್ಚು ಮಾಡುವ ಬದಲು ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಗಂಗಾಂಬಿಕೆಯವರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment