ರಾಜ್ಯ ಸುದ್ದಿ

ಅಧಿವೇಶನ: ಹಣವೆಲ್ಲಾ ಹರಿಯೋದು ಆ ಒಂದು ಖಾತೆಗೆ ಮಾತ್ರ

ಸುವರ್ಣ ವಿಧಾನಸೌಧ : ಪ್ರತಿಪಕ್ಷ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಮಂಗಳವಾರ 2018 -19ನೇ ಸಾಲಿನ ಮೊದಲ ಕಂತಿನ ಒಟ್ಟು 6,980.88 ಕೋಟಿ ರೂ. ಮೊತ್ತದ ಪೂರಕ ಅಂದಾಜಿಗೆ ವಿಧಾನಸಭೆ ಅನುಮೋದನೆ ನೀಡಿತು.

ಈ ವಿಷಯ ಇದಕ್ಕೂ ಮುನ್ನ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿಯೇ ನಡೆಯಿತು. ಬಜೆಟ್‌ ಅನುದಾನ ಬಳಕೆಯೇ ಆಗದಿರುವ ಸ್ಥಿತಿಯಲ್ಲಿ ದೊಡ್ಡ ಮೊತ್ತದ ಪೂರಕ ಅಂದಾಜಿಗೆ ಒಪ್ಪಿಗೆ ಏಕೆ ಎಂಬುದು ಬಿಜೆಪಿಯ ವಾದವಾಗಿತ್ತು. ಸದನದಲ್ಲಿ ಮಂಡನೆಯಾಗಿದ್ದ ಪ್ರಸಕ್ತ ಸಾಲಿನ ಮೊದಲ ಕಂತಿನ ಒಟ್ಟು 6,980.88 ಕೋಟಿ ರೂ.ಗಳ ಪೂರಕ ಅಂದಾಜಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸದನದ ಅನುಮೋದನೆ ಕೋರುವ ಸಂದರ್ಭದಲ್ಲಿ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಚರ್ಚೆಗೆ ಪಟ್ಟುಹಿಡಿದರು. ಪೂರಕ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಮೊತ್ತದ ವೆಚ್ಚಕ್ಕೆ ಸಮರ್ಪಕ ವಿವರಣೆಯೇ ಇಲ್ಲ ಎಂದು ಮಾಧುಸ್ವಾಮಿ ಆಕ್ಷೇಪಿಸಿದರು.

ಇಲಾಖಾವಾರು ಅನುದಾನದ ವೆಚ್ಚ ಕುರಿತಂತೆ ಮಾಹಿತಿ ಇಲ್ಲ. ಲೋಕೋಪಯೋಗಿ ಇಲಾಖೆ ಬಾಕಿ ಬಿಲ್‌ಗಳ ಪಾವತಿಗೆ ಹಣ ನೀಡಲಾಗಿದೆ. ಆದರೆ, ಯಾವ ಬಿಲ್‌ಗಳು ಎಂಬ ವಿವರ ಇಲ್ಲ. ಎಲ್ಲ ಶಾಸಕರೂ ಜನರಿಂದಲೇ ಆಯ್ಕೆಯಾಗಿ ಬಂದಿದ್ದು, ಕೆಲವೇ ಕ್ಷೇತ್ರಗಳು ಮತ್ತು ಇಲಾಖೆಗಳಿಗೆ ಅನುದಾನ ನೀಡಿರುವ ಕ್ರಮಕ್ಕೆ ನಾವೇಕೆ ಒಪ್ಪಿಗೆ ನೀಡಬೇಕು ಎಂದು ಮಾಧುಸ್ವಾಮಿ, ರಾಮದಾಸ್‌ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.

ಪ್ರತಿಪಕ್ಷ ಸದಸ್ಯರ ಮಾತಿಗೆ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಬಜೆಟ್‌ನಲ್ಲಿ ಪ್ರಸ್ತಾಪಿಸದ ಉದ್ದೇಶಗಳಿಗೆ ವೆಚ್ಚ ಮಾಡಲು ಪೂರಕ ಅಂದಾಜು ಮಂಡನೆ ಮತ್ತು ಅನುಮೋದನೆ ಹೊಸತಲ್ಲ. ಇಲಾಖಾವಾರು ಉದ್ದೇಶಗಳನ್ನು ನಮೂದಿಸಲಾಗುತ್ತದೆಯೇ ಹೊರತು, ವಿವರ ಒದಗಿಸುವುದಿಲ್ಲ. ಇದು ಹಿಂದಿನಿಂದಲೂ ನಡೆದುಬಂದಿದೆ. ಹಿಂದಿನ ಎಲ್ಲ ಪೂರಕ ಅಂದಾಜುಗಳನ್ನು ನೋಡಿ. ಎಲ್ಲವನ್ನೂ ಹಳದಿ ಕಣ್ಣಿನಿಂದ ನೋಡುವುದು ಸರಿಯಲ್ಲ ಎಂದು ವಾದಿಸಿದರು.

ಇದರಿಂದ ಅಸಮಧಾನಗೊಂಡ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ”ಹಿಂದೆ ಸಿಎಂ (ಯಡಿಯೂರಪ್ಪ) ಆಗಿದ್ದವರು ಜೇಬಿನಿಂದ ಚೀಟಿ ತೆಗೆದುಕೊಂಡು ಅನುದಾನ ಘೋಷಣೆ ಮಾಡುತ್ತಿದ್ದರಲ್ಲಾ, ಆಗ ಸುಮ್ಮನೆ ಕೂರುತ್ತಿದ್ದವರು ಈಗ ತಕರಾರು ತೆಗೆಯುತ್ತಿದ್ದೀರಿ,” ಎಂದು ತಿರುಗೇಟು ನೀಡಿದರು.

ಇಲಾಖೆಯೊಂದಕ್ಕೆ ಹಂಚಿಕೆ ಬೇಡ : ಸಿಎಂ ಮಾತಿಗೆ ಕೆರಳಿದ ಮಾಧುಸ್ವಾಮಿ, ” ವ್ಯಂಗ್ಯದ ಮಾತು ಸಿಎಂ ಹುದ್ದೆಗೆ ಗೌರವ ತರುವುದಿಲ್ಲ. ಯಾವುದೋ ಒಂದು ಇಲಾಖೆಗೆ ಮತ್ತು ಕುಟುಂಬವೊಂದಕ್ಕೆ ಹೆಚ್ಚಿನ ಅನುದಾನ ಹೋಗುತ್ತಿದೆ ಎಂಬ ಅನುಮಾನವಿದೆ. ಅದಕ್ಕಾಗಿ ವಿವರಣೆ ಕೇಳುತ್ತಿದ್ದೇನೆ,” ಎಂದು ತಿರುಗೇಟು ಕೊಟ್ಟರು. ಈ ಹಂತದಲ್ಲಿ ಉಭಯ ಕಡೆಯಿಂದಲೂ ಪ್ರತಿಭಟನೆ-ಗದ್ದಲ ನಡೆಯಿತು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್‌, ಪೂರಕ ಅಂದಾಜಿನ ಮೇಲೆ ಚರ್ಚೆ ಮಾಡುವುದು, ವಿರೋಧ ವ್ಯಕ್ತಪಡಿಸುವುದು ಪ್ರತಿಪಕ್ಷ ಸದಸ್ಯರ ಕರ್ತವ್ಯ. ಅದಕ್ಕೆ ಉತ್ತರ ನೀಡುವ ಅವಕಾಶವೂ ಸಭಾನಾಯಕರಾದ ಸಿಎಂಗೆ ಇದೆ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಸಲಹೆ ಮಾಡಿದ ಬಳಿಕ ಗದ್ದಲ ತಿಳಿಯಾಯಿತು.

About the author

ಕನ್ನಡ ಟುಡೆ

Leave a Comment