ರಾಜ್ಯ ಸುದ್ದಿ

ಅನಂತಕುಮಾರ್ ಹೆಗಡೆ ಮಾತು ಭಾರತೀಯ ಸಂಸ್ಕೃತಿಗೇ ಕಳಂಕ: ಸಚಿವ ದೇಶಪಾಂಡೆ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆಡಿರುವ ಮಾತುಗಳು ಭಾರತೀಯ ಸಂಸ್ಕೃತಿಗೇ ಕಳಂಕ ಎಂದು ಕಂದಾಯ ಸಚಿವ ದೇಶಪಾಂಡೆ ಎದುರೇಟು ನೀಡಿದ್ದಾರೆ.

ಹೆಗಡೆ ಅವರ ಮಾತುಗಳಿಗೆ ಗುರುವಾರ ಇಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು ಐದು ಸಲ ಸಂಸದರಾಗಿ ಆಯ್ಕೆಯಾಗಿರುವ ಹೆಗಡೆಯವರು ಅಭಿವೃದ್ಧಿ ಎಂದರೇನೆಂದೇ ಅರಿಯದವರಾಗಿದ್ದಾರೆ. ಹೀಗಾಗಿ, ಚುನಾವಣೆ ಹತ್ತಿರವಿರುವಾಗ ಅವರು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಹೀನ ತಂತ್ರದ ಮೊರೆ ಹೋಗಿದ್ದಾರೆ. ಇದನ್ನು ಬಿಟ್ಟರೆ ಅವರಿಗೆ ರಚನಾತ್ಮಕವಾದ ಬೇರೇನೂ ಕೆಲಸ ಗೊತ್ತಿಲ್ಲ,’’ ಎಂದು ಹರಿಹಾಯ್ದಿದ್ದಾರೆ.

ಕೇಂದ್ರ ಸಚಿವರು ಮನಸೋಇಚ್ಛೆ ಆಡುತ್ತಿರುವ ಮಾತುಗಳು ಭಾರತದ ಶ್ರೀಮಂತ ಸಂಪ್ರದಾಯ ಮತ್ತು ಪರಂಪರೆಗೇ ಕಪ್ಪುಚುಕ್ಕೆಯಾಗಿವೆ. ಕೇಂದ್ರ ಸಚಿವರಾಗಿದ್ದು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ವತಃ ಇವರೇ ಸಂವಿಧಾನದ ತತ್ತ್ವ ಮತ್ತು ಆಶಯಗಳಿಗೆ ತದ್ವಿರುದ್ಧವಾಗಿದ್ದು, ನಮ್ಮ ದೇಶದ ಜಾತ್ಯತೀತ ಸಂಸ್ಕೃತಿ ಮತ್ತು ಐಕ್ಯತೆಗೆ ತಾವೇ ಬೆದರಿಕೆಯಾಗಿ ಪರಿಣಮಿಸಿರುವುದು ದುರದೃಷ್ಟಕರ,’’ ಎಂದು ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ದೇಶದ ಪ್ರಗತಿ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡಲು ಯಾವ ಗಟ್ಟಿ ವಿಚಾರವನ್ನೂ ಹೊಂದಿರದ ಕೇಂದ್ರ ಸಚಿವರು, ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯಲು ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸುವ ವ್ಯಸನಕ್ಕೆ ತುತ್ತಾಗಿದ್ದಾರೆ. ಅವರ ಮಾತುಗಳು ತೀವ್ರ ಖಂಡನಾರ್ಹವಾಗಿದ್ದು, ಇಂಥ ವ್ಯಕ್ತಿಯನ್ನು ಸಂಸದರನ್ನಾಗಿ ಆರಿಸಿದ ಜನರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ, ಎಂದು ದೇಶಪಾಂಡೆ ನುಡಿದಿದ್ದಾರೆ.

About the author

ಕನ್ನಡ ಟುಡೆ

Leave a Comment