ಸಿನಿ ಸಮಾಚಾರ

ಅಪ್ಪನ ಅಗಲಿಕೆ ನೋವಿನಲ್ಲೂ ಅಭಿಷೇಕ್‌ ಚಿತ್ರೀಕರಣದಲ್ಲಿ ಭಾಗಿ

ಅಪ್ಪನ ಅಗಲಿಕೆಯ ನೋವಿನಲ್ಲೂ ‘ಅಮರ್‌’ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ ಅಂಬರೀಶ್‌ ಪುತ್ರ ಅಭಿಷೇಕ್‌ ಕೆಲವೇ ದಿನಗಳಲ್ಲಿ ಮತ್ತೆ ಅಮರ್‌ ಸಿನಿಮಾದ ಶೂಟಿಂಗ್‌ ಪ್ರಾರಂಭಗೊಳ್ಳಲಿದ್ದು, ಅದಕ್ಕಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಪ್ಪನ ವೃತ್ತಿ ಧರ್ಮವನ್ನು ಮಗ ನೆನಪಿಸುತ್ತಿದ್ದಾರೆ.

1978ರಲ್ಲಿ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಪಡುವಾರಳ್ಳಿ ಪಾಂಡವರು’ ಸಿನಿಮಾದ ಶೂಟಿಂಗ್‌ನಲ್ಲಿದ್ದರು ಅಂಬರೀಶ್‌. ಈ ವೇಳೆಯಲ್ಲಿ ಅಂಬರೀಶ್‌ ತಂದೆ ಹುಚ್ಚೇಗೌಡರ ನಿಧನವಾಗಿತ್ತು. ಚಿಕ್ಕಮಗಳೂರಿನಿಂದ ಒಬ್ಬರೇ ಡ್ರೈವ್‌ ಮಾಡಿಕೊಂಡು ಬಂದು ಅಪ್ಪನ ಅಂತಿಮ ದರ್ಶನ ಪಡೆದಿದ್ದರು. ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಮತ್ತು ತಮ್ಮ ತಾಯಿಯು ಕೆಲಸಕ್ಕೆ ಹೋಗು ಎಂದು ಹೇಳಿದ್ದಕ್ಕೆ ಅಪ್ಪನ ಸಾವಾದ ಮೂರೇ ದಿನಕ್ಕೆ ಮತ್ತೆ ವಾಪಸ್ಸು ಶೂಟಿಂಗ್‌ಗೆ ತೆರಳಿದ್ದರು ಅಂಬರೀಶ್‌. ಈಗ ಅವರ ಪುತ್ರ ಕೂಡ ಅದೇ ಮಾದರಿಯ ಕೆಲಸ ಮಾಡಿದ್ದಾರೆ.

‘ಅಮರ್‌’ ಅಭಿಷೇಕ್‌ ನಟನೆಯ ಚೊಚ್ಚಲು ಸಿನಿಮಾ. ಈಗಾಗಲೇ ಶೇ.60ರಷ್ಟು ಶೂಟಿಂಗ್‌ ಮುಗಿದಿದೆ. ಶೂಟಿಂಗ್‌ ಆದ ಅಷ್ಟೂ ದೃಶ್ಯಗಳನ್ನು ಅಂಬರೀಶ್‌ ಕಣ್ತುಂಬಿಕೊಂಡಿದ್ದಾರೆ. ಮಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ. ಹಾಗಾಗಿ ಅಪ್ಪನ ಆಸೆಯನ್ನು ಪೂರ್ಣಗೊಳಿಸಲು ಅಭಿಷೇಕ್‌ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾರೆ. ಅಪ್ಪನಿಂದಲೂ ಕೆಲ ಟಿಫ್ಸ್‌ ಪಡೆದುಕೊಂಡು ಪಾತ್ರ ಪೋಷಿಸುತ್ತಿದ್ದಾರೆ. ಸಂಜು ವೆಡ್ಸ್‌ ಗೀತಾ ಖ್ಯಾತಿಯ ನಾಗಶೇಖರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಈ ಸಿನಿಮಾದಲ್ಲಿ ಅಭಿ ಬೈಕ್‌ ರೈಡರ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಭಿ ಜತೆ ಬಹುಭಾಷಾ ನಟಿ ತಾನ್ಯ ಹೋಪ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಂಬರೀಶ್‌ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಅಮರನಾಥ್‌’. ಅಭಿಷೇಕ್‌ ಮೊದಲ ಸಿನಿಮಾ ‘ಅಮರ್‌’. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಈ ಚಿತ್ರದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಮೂಡಿದೆ.

About the author

ಕನ್ನಡ ಟುಡೆ

Leave a Comment