ರಾಷ್ಟ್ರ ಸುದ್ದಿ

ಅಪ್ರಾಯೋಗಿಕ ನಾಯಕತ್ವದಿಂದ ದೇಶ ನಡೆಸಲಾಗದು : ಪ್ರಣವ್‌ ಮುಖರ್ಜಿ

ಹೊಸದಿಲ್ಲಿ : ಸದಾಕಾಲ ಹೆಚ್ಚುತ್ತಲೇ ಇರುವ ಜನರ ನಿರೀಕ್ಷೆಗಳು, ಬೇಡಿಕೆಗಳು ಮತ್ತು ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುವ ಜನ ನಾಯಕ ಇಂದು ದೇಶಕ್ಕೆ ಬೇಕಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದ್ದಾರೆ. ಅಸಾಧ್ಯವಾದದ್ದನ್ನು, ಅಪ್ರಾಯೋಗಿಕವಾಗಿರುವುದನ್ನು ಸಾಧಿಸಿ ತೋರುವುದಾಗಿ ಕೊಚ್ಚಿಕೊಳ್ಳುವ ಕ್ವಿಕ್ಸಾಟಿಕ್‌ ಹಿರೋಯಿಸಂ ನಿಂದ ದೇಶವನ್ನು ನಡೆಸಲಾಗದು ಎಂದವರು ಹೇಳಿದರು.

ಎಐಎಂಎ ಮ್ಯಾನೇಜಿಂಗ್‌ ಇಂಡಿಯ ಅವಾರ್ಡ್‌ ಸಮಾರಂಭದಲ್ಲಿ ಕಾರ್ಪೊರೇಟ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು “ದೇಶದಲ್ಲಿನ ಬಡತನ ಸಂಪೂರ್ಣವಾಗಿ ತೊಲಗುವುದಕ್ಕೆ ಇನ್ನೂ ದೀರ್ಘ‌ವಾದ ಹಾದಿಯನ್ನು ಸವೆಸಬೇಕಾಗಿರುವುದರಿಂದ ದೇಶಕ್ಕೆ ಜನರಿಗಾಗಿ ಶ್ರಮಿಸುವ ಮತ್ತು ಅವರ ಸದಾ ಕಾಲ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ನಾಯಕತ್ವ ಬೇಕಾಗಿದೆ’ ಎಂದು ಹೇಳಿದರು.

ದೇಶದ ಕೇವಲ ಶೇ.1ರಷ್ಟು ಜನರು ದೇಶದ ಒಟ್ಟು ಸಂಪತ್ತಿನ ಶೇ.60ರಷ್ಟನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಸತ್ಯಾಂಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಣವ್‌, ದೇಶದಲ್ಲಿನ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಪೋರೇಟ್‌ಗಳು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment