ರಾಷ್ಟ್ರ

ಅಮೃತಸರದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತವಲ್ಲ, ಪರಿಹಾರ ನೀಡುವುದಿಲ್ಲ: ರೈಲ್ವೇ ಇಲಾಖೆ

ನವದೆಹಲಿ: ಅಮೃತಸರದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತವಲ್ಲ. ಹೀಗಾಗಿ ಇಲಾಖೆ ಯಾವುದೇ ರೀತಿಯ ಪರಿಹಾರವನ್ನೂ ನೀಡುವುದಿಲ್ಲ ಎಂದು ಕೇಂದ್ರ ಸಂವಹನ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಶನಿವಾರ ಹೇಳಿದ್ದಾರೆ.
ದುರಂತ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದುರ್ಘಟನೆ ರೈಲು ಅಪಘಾತವಲ್ಲ. ಹೀಗಾಗಿ ಇಲಾಖೆ ಪರಿಹಾರವನ್ನು ನೀಡುವುದಿಲ್ಲ. ಹಾಗೂ ರೈಲು ಅಪಘಾತ ಪಟ್ಟಿಯಲ್ಲಿ ಈ ಪ್ರಕರಣನ್ನು ಸೇರ್ಪಡೆಗೊಳಿಸುವುದೂ ಇಲ್ಲ ಎಂದು ಹೇಳಿದ್ದಾರೆ. ದುರಂತ ಕುರಿತಂತೆ ರೈಲ್ವೇ ಇಲಾಖೆ ತನಿಖೆ ನಡೆಸುವ ಅಗತ್ಯವಿಲ್ಲ. ರೈಲನ್ನು ಎಲ್ಲೆಲ್ಲಿ ತಡವಾಗಿ ಚಾಲನೆ ಮಾಡಬೇಕು, ಎಲ್ಲಿ ವೇಗವಾಗಿ ಚಾಲನೆ ಮಾಡಬೇಕೆಂಬ ಸೂಚನೆಗಳನ್ನು ಚಾಲಕರಿಗೆ ನೀಡಲಾಗಿತ್ತು. ಹಳಿ ಮೇಲೆ ಜನರಿರುವುದು ಚಾಲಕನಿಗೆ ಕಾಣಿಸಿಲ್ಲ. ಘಟನೆ ಸಂಬಂಧ ಎನೆಂದು ತನಿಖೆಗೆ ಆದೇಶಿಸಬೇಕು? ರೈಲುಗಳು ವೇಗವಾಗಿಯೇ ಚಲಿಸುತ್ತೇವೆ. ರೈಲ್ವೇ ಹಳಿಗಳ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾಗ ಜನರು ಹಳಿಗಳಿಂದ ದೂರವಿರಬೇಕಿತ್ತು ಎಂದು ತಿಳಿಸಿದ್ದಾರೆ. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿರುವ 13 ವರ್ಷದ ಬಾಲಕನ ಮೃತದೇಹವನ್ನಿಟ್ಟುಕೊಂಡು ಪರಿಹಾರ ನೀಡುವಂತೆ ಕುಟುಂಬವೊಂದು ಆಗ್ರಹಿಸುತ್ತಿದೆ.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವಾನಿ ಲೋಹಾನಿಯವರು, ದಸರಾ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಕುರಿತಂತೆ ನಮಗೆ ಯಾವುದೇ ರೀತಿಯ ಮಾಹಿತಿಗಳನ್ನೂ ನೀಡಿರಲಿಲ್ಲ. ನಿಗದಿತ ವೇಗದಲ್ಲಿ ರೈಲುಗಳು ಚಲಿಸುತ್ತಿದ್ದವು. ಜನರು ಹಳಿಗಳ ಬಳಿ ಇರುವುದನ್ನು ನಿರೀಕ್ಷಿಸಿರಲಿಲ್ಲ. ಹೀಗಾಗಿ ಸ್ಥಳದಲ್ಲಿ ಯಾವುದೇ ರೈಲ್ವೇ ಸಿಬ್ಬಂದಿಗಳೂ ಕೂಡ ಇರಲಿಲ್ಲ. ಹಳಿಗಳನ್ನು ದಾಟುವ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಚಾಲಕರು ಎಮರ್ಜೆನ್ಸಿ ಬ್ರೇಕ್ ಹಾಕಿದ್ದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment