ರಾಷ್ಟ್ರ ಸುದ್ದಿ

ಅಮೃತಸರ ರೈಲು ದುರಂತ: ರೈಲ್ವೆ ಅಧಿಕಾರಿಗಳ ಬಳಿ ರೈಲು ಚಾಲಕ ಹೇಳಿದ್ದೇನು

ಅಮೃತಸರ: ದಸರಾ ಹಬ್ಬದ ಸಂಭ್ರಮದಲ್ಲಿದ್ದ ದೇಶದ ಜನತೆಗೆ ದಿಢೀರ್​ ಶಾಕ್​ ನೀಡಿದ ಅಮೃತಸರ ರೈಲು ದುರಂತ ಸಂಬಂಧ ರೈಲು ಚಾಲಕ ಅರವಿಂದ್​ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.​ ರೈಲ್ವೆ ಅಧಿಕಾರಿಗಳಿಗೆ ಬರವಣಿಗೆ ರೂಪದಲ್ಲಿ ಹೇಳಿಕೆ ನೀಡಿರುವ ರೈಲು ಚಾಲಕ, ಘಟನೆಯ ದಿನ ನಾನು ರೈಲು ಹಳಿಯ ಬಳಿ ಜನಜಂಗುಳಿ ಇರುವುದನ್ನು ನೋಡಿದೆ. ತಕ್ಷಣ ಹಾರ್ನ್​ ಮಾಡಿದೆ. ಅಲ್ಲದೆ, ಎಮರ್ಜೆನ್ಸಿ ಬ್ರೇಕ್​ ಕೂಡ ಹಾಕಿದೆ. ಆದರೂ ರೈಲು ಕೆಲವು ಜನರ ಮೇಲೆ ಹರಿಯಿತು. ಯಾವಾಗ ಜನರ ದೊಡ್ಡ ಗುಂಪು ಕಲ್ಲುಗಳ ಎಸೆಯುವ ಮೂಲಕ ರೈಲಿನ ಮೇಲೆ ಆಕ್ರಮಣ ಮಾಡಲು ಮುಂದಾದರೂ ಅಷ್ಟೊತ್ತಿಗೆ ರೈಲು ಕೂಡ ನಿಂತಿತು. ಆದರೆ, ನನ್ನ ಪ್ರಯಾಣಿಕರ ಹಿತದೃಷ್ಟಿಯಿಂದ ನಾನು ರೈಲು ಚಾಲನೆಯನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾನೆ.

ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್​ ಮಿಶ್ರಾ ಅವರು ಘಟನಾ ಕುರಿತಾಗಿ ಮಾತನಾಡಿದ್ದು, ಇದರಲ್ಲಿ ಚಾಲಕನ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಚಾಲಕ ನಿಯಮಿತ ವೇಗದಲ್ಲಿ ರೈಲು ಚಾಲನೆ ಮಾಡುತ್ತಿದ್ದ. ಈ ದುರಂತವು ರೈಲು ಅಪಘಾತ ಪ್ರಕರಣವಲ್ಲ. ಇದು ಅತಿಕ್ರಮಣ ಪ್ರಕರಣವಾಗಿದ್ದು, ಮೃತಪಟ್ಟ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆಯಲ್ಲಿ ಪಂಜಾಬ್​ ಸರ್ಕಾರ ಶನಿವಾರ ಈ ದುರಂತವನ್ನು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದ್ದು, ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ತಿಳಿಸಿದ್ದಾರೆ.

ದಸರಾ ಹಬ್ಬದ ದಿನವೇ ಪಂಜಾಬ್​ನ ಅಮೃತಸರ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಗಿತ್ತು. ಶುಕ್ರವಾರ ರಾತ್ರಿ ಜೋಡಿ ರೈಲು ಹಳಿ ಸಮೀಪದ ಮೈದಾನದಲ್ಲಿ ನಡೆಯುತ್ತಿದ್ದ ರಾವಣ ಪ್ರತಿಕೃತಿ ದಹನ ವೀಕ್ಷಿಸುತ್ತಿದ್ದವರ ಮೇಲೆ ಹರಿದ ಪರಿಣಾಮ 60 ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು.

About the author

ಕನ್ನಡ ಟುಡೆ

Leave a Comment