ರಾಷ್ಟ್ರ ಸುದ್ದಿ

ಅಯ್ಯಪ್ಪನ ದರ್ಶನವಾಗದ ಹೊರತು ವಾಪಸ್ ತೆರಳುವ ಮಾತೇ ಇಲ್ಲ: ತೃಪ್ತಿ ದೇಸಾಯಿ

ಕೊಚ್ಚಿ: ಕೇರಳದ ಖ್ಯಾತ ಪವಿತ್ರ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಕೊಚ್ಚಿಗೆ ಆಗಮಿಸಿರುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಅಯ್ಯಪ್ಪ ಭಕ್ತರ ಪ್ರತಿಭಟನೆ ಜೋರಾಗಿ ತಟ್ಟಿದಂತಿದೆ. ಈಗಾಗಲೇ ಶಬರಿಮಲೆಗೆ ತೆರಳು ತೃಪ್ತಿ ದೇಸಾಸಿ ಮತ್ತು ಅವರ ತಂಡ ಕೊಚ್ಚಿ ವಿಮಾನ ನಿಲ್ಗಾಣಕ್ಕೆ ಆಗಮಿಸಿದ್ದಾರೆಯಾದರೂ, ವಿಮಾನ ನಿಲ್ದಾಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿರುವುದರಿಂದ ತೃಪ್ತಿ ದೇಸಾಯಿ ಮತ್ತು ಅವರ ತಂಡ ವಿಮಾನ ನಿಲ್ದಾಣದಿಂದ ಹೊರಗೆ ಬಂದಿಲ್ಲ.
ಮುಂಜಾಗ್ರತಾ ಕ್ರಮವಾಗಿ ಅವರನ್ನು ನಿಲ್ದಾಣದಲ್ಲಿಯೇ ಇರಿಸಿಕೊಳ್ಳಲಾಗಿದೆ. ಅಂತೆಯೇ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ತೃಪ್ತಿ ದೇಸಾಯಿ ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿಮಾನ ನಿಲ್ದಾಣದಲ್ಲೇ ಅವರು ತಮ್ಮ ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತೃಪ್ತಿ ದೇಸಾಯಿ, ಅಯ್ಯಪ್ಪನ ದರ್ಶನ ಪಡೆಯದ ಹೊರತು ತಾವು ಕೇರಳದಿಂದ ತೆರಳವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಪ್ರತಿಭಟನೆಯಿಂದ ನಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ಭದ್ರತೆ ಕೋರಿ ಕೇರಳ ಪೊಲೀಸರಿಗೆ ಮನವಿ ಮಾಡಿದ್ದು, ವಿಐಪಿ ಭದ್ರತೆ ನೀಡುವಂತೆ ಮನವಿ ಮಾಜಿಕೊಂಡಿದ್ದೇವೆ. ಈ ಬಗ್ಗೆ ಕೊಚ್ಚಿ ಪೊಲೀಸ್ ನಿರ್ದೇಶಕರಿಗೆ ಕರೆ ಮಾಡಿ ಮನವಿ ಮಾಡಲಾಗಿದ್ದು, ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಭದ್ರತೆ ನೀಡುವಂತೆ ಸ್ವತಃ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಇಲ್ಲಿನ ಪೊಲೀಸರು ಭದ್ರತೆ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿಯೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ದೇವರ ದರ್ಶನ ಪಡೆಯಲೆಂದು ಶಬರಿಮಲೆಗೆ ಆಗಮಿಸುತ್ತಿರುವ ಮಹಿಳೆಯರನ್ನು ಹಿಮ್ಮೆಟ್ಟಿಸಲು ಭಕ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಪ್ರತಿಭಟನಾಕಾರರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಇಂದು ಸಂಜೆ 5 ಗಂಟೆಯಿಂದ ಶಬರಿಯಮಲೆಯಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನ ಸಿಗಲಿದೆ. ಎರಡು ತಿಂಗಳ ಕಾಲ ದೇಗುಲ ತೆರೆದಿರಲಿದೆ.

About the author

ಕನ್ನಡ ಟುಡೆ

Leave a Comment