ರಾಜಕೀಯ

ಅರ್ಧ ವರ್ಷ ಪೂರೈಸಿದ ಮೈತ್ರಿ ಸರ್ಕಾರ: ಬಿಜೆಪಿಯಿಂದ ನಿಜ ಹೇಳಿ ಕುಮಾರಣ್ಣ ಅಭಿಯಾನ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ‘ನಿಜ ಹೇಳಿ ಕುಮಾರಣ್ಣ’ ಎಂಬ ಅಭಿಯಾನವನ್ನು ಶುರು ಮಾಡಿ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್​ ಕರುಣೆಯ ಬುನಾದಿ ಮೇಲೆ ಸಿಎಂ ಕುಮಾರಸ್ವಾಮಿ ನೇತೃತ್ವದ ಅಪವಿತ್ರ ಮೈತ್ರಿ ಸರ್ಕಾರ ಇಂದಿಗೆ ಆರು ತಿಂಗಳನ್ನು ಪೂರ್ಣಗೊಳಿಸಿದೆ. ಈ 184 ದಿನಗಳ ದುರಾಡಳಿತದಲ್ಲಿ ಸಂಪುಟ ವಿಸ್ತರಣೆ ಮಾಡುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಅಧಿಕಾರದ ದುರಾಸೆಯಿಂದ ಸಚಿವ ಖಾತೆ ಹಂಚಿಕೆಯನ್ನು ಹಿಡಿದಿಟ್ಟುಕೊಂಡಿರುವ ಸಿಎಂ ನಡೆಯಿಂದ ಸಂಪೂರ್ಣ ಆಡಳಿತ ದುರ್ಬಲಗೊಂಡಿದೆ ಎಂದು ತನ್ನ ಟ್ವಿಟರ್​ ಖಾತೆಯಲ್ಲಿ ಬಿಜೆಪಿ ಕಿಡಿಕಾರಿದೆ.

ನಿಜ ಹೇಳಿ ಕುಮಾರಣ್ಣ ಎಂಬ ಹ್ಯಾಸ್​​ಟ್ಯಾಗ್​ನೊಂದಿಗೆ ಸಿಎಂಗೆ ಪ್ರಶ್ನೆಗಳ ಸವಾಲನ್ನು ಎಸೆದಿರುವ ಬಿಜೆಪಿ, ಯಾವಾಗ ಒಳ್ಳೆಯ ಆಡಳಿತವನ್ನು ನೋಡಬಹುದು? ರೈತರ ಸಾಲಮನ್ನಾ ಯಾವಾಗ ಮಾಡುತ್ತೀರಾ ಹೇಳಿ? ರಾಜ್ಯ ಸಚಿವ ಸಂಪುಟ ಯಾವಾಗ ವಿಸ್ತರಣೆ ಮಾಡುತ್ತೀರಿ? ಬರ ತಾಲೂಕುಗಳಿಗೆ ಅನುದಾನ ಬಿಡುಗಡೆ ಯಾವಾಗ? ಕನಿಷ್ಠ ಕಾರ್ಯಕ್ರಮ ಜಾರಿ ಬಗ್ಗೆ ಯಾವಾಗ ಚರ್ಚಿಸುತ್ತೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

About the author

ಕನ್ನಡ ಟುಡೆ

Leave a Comment