ರಾಜಕೀಯ

ಅವರ ಪರ ಮಾಡಿದರೆ ಅದು ಪ್ರಚಾರ, ನನ್ನ ಪರ ಮಾಡಿದರೆ ಅದು ಅನಾಚಾರವೇ: ಸಿಎಂ ವಿರುದ್ಧ ಸುಮಲತಾ ಗರಂ

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಅಖಾಡ ಮಾತಿನ ಸಮರಕ್ಕೆ ವೇದಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅವರಿಗೆ ನಟರಾದ ದರ್ಶನ್​ ಮತ್ತು ಯಶ್​ ಬಹಿರಂಗ ಬೆಂಬಲ ನೀಡಿದ್ದಕ್ಕೆ ಅವರ ವಿರುದ್ಧ ಮುಗಿಬಿದ್ದಿರುವ ಸಿಎಂ ಕುಮಾರಸ್ವಾಮಿ ಸೇರಿ ಮೈತ್ರಿ ನಾಯಕರ ನಡೆಯನ್ನು ಸುಮಲತಾ ಟೀಕಿಸಿದ್ದಾರೆ.

ನನ್ನ ಪರ ಪ್ರಚಾರ ಮಾಡಿದರೆ ಅದು ಅನಾಚಾರವೇ ?: ಪ್ರಚಾರಕ್ಕಾಗಿ ಮಂಗಳವಾರ ಕೆಆರ್​ಎಸ್​ಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ, ದರ್ಶನ್, ಯಶ್ ಕಳ್ಳೆತ್ತು ಎಂದು ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ಸಾ.ರಾ. ಮಹೇಶ್ ಪರ ಯಶ್ ಪ್ರಚಾರ ಮಾಡಿದ್ದರು. ಅವರ ಪರ ಮಾಡಿದರೆ ಅದು ಪ್ರಚಾರ, ನನ್ನ ಪರ ಮಾಡಿದರೆ ಅದು ಅನಾಚಾರವೇ ಎಂದು ಪ್ರಶ್ನಿಸಿದರು.

ಅವರ ಲಾಜಿಕ್ ನನಗೆ ಅರ್ಥ ಆಗುತ್ತಿಲ್ಲ: ನಿಖಿಲ್ ಗೆಲ್ಲಿಸಿದರೆ ಅಂಬಿ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ತಿರುಗೇಟು ನೀಡಿ, ಮಂಡ್ಯ ಜನತೆಗೆ ದ್ರೋಹ ಮಾಡಿದರೆ ಅಂಬಿ​ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಅವರ ಲಾಜಿಕ್ ನನಗೆ ಅರ್ಥ ಆಗುತ್ತಿಲ್ಲ. ನಾನು ಮಂಡ್ಯ ಜನರ ಪರವಾಗಿ ನಿಂತರೆ ಅಂಬಿ ಆತ್ಮಕ್ಕೆ ಶಾಂತಿ ಸಿಗುತ್ತದೋ ಅಥವಾ ಅವರು ನಿಂತರೆ ಶಾಂತಿ ಸಿಗುತ್ತದೋ ನೋಡೋಣ, ಅಂಬಿ ಮೇಲೆ ಅಷ್ಟು ಪ್ರೀತಿ ಇದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.

ಕೀಳುಮಟ್ಟದ ಹೇಳಿಕೆಗಳು ಶೋಭೆ ತರುವುದಿಲ್ಲ: ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವುದು ಬೇಡ ಎಂದು ಕೆಲವರು ಹೇಳಿದ್ದರು ಎಂಬ ಸಿಎಂ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು ಸಾವಿನಲ್ಲೂ ರಾಜಕಾರಣ ಮಾಡುವುದು ಕೀಳುಮಟ್ಟದ ರಾಜಕೀಯ. ಸಿಎಂ ಆಗಲಿ, ಬೇರೆಯವರಾಗಲಿ ಅದು ತಪ್ಪೇ, ಸಿಎಂ ಆದವರಿಗೆ ಕೀಳುಮಟ್ಟದ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಜರಿದರು.

ನಾನು ಶಕ್ತಿ ಪ್ರದರ್ಶನ ಮಾಡಿಲ್ಲ: ನಾನು ಹೋದಲೆಲ್ಲಾ ಜನರ ಸ್ಪಂದನೆ ಚೆನ್ನಾಗಿದೆ. ಸೋಮವಾರ ಅವರು ಶಕ್ತಿ ಪ್ರದರ್ಶನ ಮಾಡಿದ್ದಾರೆ, ನಾನು ಶಕ್ತಿ ಪ್ರದರ್ಶನ ಮಾಡಿಲ್ಲ. ನನ್ನ ಕಾರ್ಯಕ್ರಮಕ್ಕೆ ಜನ ತಾನಾಗೇ ಬಂದರು. ನಾನು ಜನ ಸೇರಿಸಿ ಯಾರಿಗೂ ಸವಾಲು ಹಾಕಿಲ್ಲ ಎಂದು ಹೇಳಿದರು

About the author

ಕನ್ನಡ ಟುಡೆ

Leave a Comment