ರಾಷ್ಟ್ರ ಸುದ್ದಿ

ಅಹಮದಾಬಾದ್‌: ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ ‘ಏಕತಾ ಪ್ರತಿಮೆ’ ಲೋಕಾರ್ಪಣೆಗೆ ಸಜ್ಜು

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ ‘ಏಕತಾ ಪ್ರತಿಮೆ’ ಲೋಕಾರ್ಪಣೆಗೆ ಸಜ್ಜಾಗಿದ್ದು, ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿದ್ದು, ಪ್ರತಿಮೆ 182 ಮೀಟರ್‌ ಎತ್ತರದಿಂದ ಕೂಡಿದೆ. ಇಂದು ಅಂದರೆ ಅಕ್ಟೋಬರ್‌ 31ರಂದು ಸರ್ಧಾರ್ ಪಟೇಲ್ ಅವರ 142ನೇ ಜನ್ಮದಿನಾಚರಣೆಯೂ ಹೌದು. ಇದೇ ಕಾರಣಕ್ಕೆ ಏಕೀಕರಣದ ಹರಿಕಾರನ ಸ್ಮಾರಕವನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ. ನರ್ಮದಾ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ದೇಶಕ್ಕೆ ಸಮರ್ಪಿಸುವರು. ನಂತರ ವಾಯು ಸೇನೆಯ ಮೂರು ವಿಮಾನಗಳು ಹಾರಾಟ ನಡೆಸಿ, ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ತ್ರಿವರ್ಣ ಧ್ವಜದ ಮಾದರಿ ರಚಿಸಲಿವೆ ಎಂದು ಸರ್ಕಾರದ ವರದಿಗಳು ತಿಳಿಸಿವೆ. ಪ್ರತಿಮೆಯ ಹತ್ತಿರವೇ ನಿರ್ಮಿಸಿರುವ ಭಾರತದ ಏಕತೆಯನ್ನು ಸಾರುವ ಸ್ಮಾರಕ ‘ಏಕತಾ ಗೋಡೆ’ಯ ಉದ್ಘಾಟನೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಮೂರು ಜಾಗ್ವಾರ್ ಯುದ್ಧ ವಿಮಾನಗಳು ಗೋಡೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿವೆ.
ಪಟೇಲ್‌ ಪ್ರತಿಮೆಗೆ ಪ್ರಧಾನಿ ಮೋದಿಯವರು ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಎಂಐ–17 ಹೆಲಿಕಾಪ್ಟರ್ ಗಳಿಂದ ಪ್ರತಿಮೆಗೆ ಹೂವಿನ ಸುರಿಮಳೆಯಾಗಲಿದೆ. ಈ ಸಂದರ್ಭದಲ್ಲಿ 29 ರಾಜ್ಯಗಳ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಟೇಲ್ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಆಚರಿಸ ಲಾಗುತ್ತಿದ್ದು, ರಾಷ್ಟ್ರೀಯ ಏಕತಾ ಓಟ ನಡೆಸುವ ಮೂಲಕ ಪಟೇಲರ ದೇಶಸೇವೆಯನ್ನು ಸ್ಮರಿಸಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment