ರಾಷ್ಟ್ರ

ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ವಿವಾದ: ಸಿಎಂ ಚಂದ್ರಬಾಬು ನಾಯ್ಡು ಭೇಟಿ ಮಾಡಿದ ಕೇಜ್ರಿವಾಲ್

ನವದೆಹಲಿ; ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಟಿಡಿಪಿ ವಿವಿಧ ಪಕ್ಷಗಳ ಬೆಂಬಲಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದು, ಈ ನಡುವೆಯೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ನವದೆಹಲಿಯಲ್ಲಿರುವ ಆಂಧ್ರ ಭವನಕ್ಕೆ ಭೇಟಿ ನೀಡಿದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು. ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪಟ್ಟುಹಿಡಿದು ಕುಳಿತಿರುವ ಚಂದ್ರಬಾಬು ನಾಯ್ಡು ಅವರು ಎರಡು ದಿನಗಳ ಕಾಲ ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದಾರೆ. ನಿನ್ನೆಯಷ್ಟೇ ದೆಹಲಿಗೆ ಆಗಮಿಸಿದ ನಾಯ್ಡು ಅವರು, ಸಂಸತ್ತಿನ ಕೇಂದ್ರೀಯ ಹಾಲ್ ನಲ್ಲಿ ವಿವಿಧ ಪಕ್ಷಗಳ ವಿವಿಧ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಎನ್’ಸಿಪಿ ನಾಯಕ ಶರದ್ ಪವರ್, ಫಾರೂಕ್ ಅಬ್ದುಲ್ಲಾ, ಸೌಗರ ರಾಯ್, ಸುಪ್ರೀಯಾ ಸುಳೆ, ಜ್ಯೋತಿರಾದಿತ್ಯ ಸಿಕಿಂದಿಯಾ, ಜಿತೇಂದ್ರ ರೆಡ್ಡಿ, ವೀರಪ್ಪ ಮೊಯ್ಲಿ ಹಾಗೂ ರಾಜೀವ್ ಸತವ್ ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಮಾಡಿ ಮಾತಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment