ರಾಜ್ಯ ಸುದ್ದಿ

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣ: ರೆಡ್ಡಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ, ಸಿಸಿಬಿಗೆ ತೀವ್ರ ತರಾಟೆ

ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು 1ನೇ ಎಸಿಎಂಎಂ ನ್ಯಾಯಾಲಯ ಬುಧವಾರಕ್ಕೆ ಕಾಯ್ದಿರಿಸಿದೆ.

ಆಂಬಿಡೆಂಟ್ ಕಂಪನಿ ಕಡೆಯಿಂದ 57 ಕೆಜಿ ಚಿನ್ನ ಪಡೆದ ಆರೋಪದಲ್ಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮತ್ತೊಂದೆಡೆ ರೆಡ್ಡಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ 1ನೇ ಎಸಿಎಂಎಂ ನ್ಯಾಯಾಲಯ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ರೆಡ್ಡಿ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿ, 57 ಕೆಜಿ ಚಿನ್ನಕ್ಕೂ ರೆಡ್ಡಿಗೂ ಸಂಬಂಧ ಇಲ್ಲ. 4ನೇ ಆರೋಪಿ ರಮೇಶ್​ನಿಂದ 5ನೇ ಆರೋಪಿ ಅಲಿಖಾನ್ ಚಿನ್ನ ಪಡೆದಿದ್ದಾರೆ ಎನ್ನಲಾಗಿದೆ. ಅಲಿಖಾನ್ ಚಿನ್ನ ಕೊಡಬೇಕೇ ಹೊರತು ಜನಾರ್ದನ ರೆಡ್ಡಿಯಲ್ಲ. ಎಫ್​ಐಆರ್​ನಲ್ಲಿ ರೆಡ್ಡಿ ಹೆಸರಿಲ್ಲ. ಕೋರ್ಟ್​ಗೆ ಸಲ್ಲಿಸಿರುವ ರಿಮೈಂಡ್ ಅಪ್ಲೀಕೇಷನ್​ನಲ್ಲೂ ಹೆಸರಿಲ್ಲ. ಆದರೂ ಬಂಧಿಸಲಾಗಿದೆ. ನೋಟಿಸ್ ಕೊಟ್ಟ ಕೂಡಲೇ ಸಿಸಿಬಿ ಕಚೇರಿಗೆ ವಿಚಾರಣೆಗೆ ರೆಡ್ಡಿ ಹಾಜರಾಗಿದ್ದು, 12 ಗಂಟೆಗಳ ಕಾಲ ವಿಚಾರಣೆ ನಡೆಸಿ ಸಿಸಿಬಿ ಕಚೇರಿಯಲ್ಲೇ ಉಳಿಸಿಕೊಂಡು ಆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಬಿಐ ಪ್ರಕರಣಗಳಲ್ಲಿ ರೆಡ್ಡಿ ಹಾಜರು ಆಗಬೇಕಿರುವ ಕಾರಣ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಸಿಸಿಬಿಗೆ ತರಾಟೆ; ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಜನಾರ್ದನ ರೆಡ್ಡಿ ಮತ್ತು ಕಂಪನಿಗೆ ನೇರ ನಂಟು ಇದೆಯಾ? ಹಣ ರೆಡ್ಡಿಗೆ ಯಾರಾದರೂ ಕೊಟ್ಟಿದ್ದಾರಾ? ನೇರವಾಗಿ ಲಿಂಕ್ ಇದೆಯಾ? ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೇ ಮತ್ತೊಂದು. ಗ್ರಾಹಕರು ಅಥವಾ ದೂರುದಾರರು ರೆಡ್ಡಿ ವಿರುದ್ಧ ಕೇಸ್ ಕೊಟ್ಟಿಲ್ಲ. ಹಾಗಿದ್ದರೂ ಸಂಬಂಧ ಇದೆ ಎಂದು ಹೇಗೆ ಹೇಳುತ್ತೀರಾ? ಎಂದು ಸಿಸಿಬಿ ಅಧಿಕಾರಿಗೆ ತರಾಟೆ ತೆಗೆದುಕೊಂಡರು.

ಅಲಿಖಾನ್ ಪ್ರಮಾಣ ಪತ್ರ; ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿರುವ ಅಲಿಖಾನ್ ವಿರುದ್ಧ ಸಿಸಿಬಿ ಪೊಲೀಸರು ಜಾಮೀನು ರದ್ದು ಮಾಡುವಂತೆ ಕೋರಿದ್ದಾರೆ. ಜತೆಗೆ ನಿರೀಕ್ಷಣಾ ಜಾಮೀನಿಗೂ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದೇ ವೇಳೆ ಅಲಿಖಾನ್, ತನ್ನ ವಿರುದ್ಧ ಕೇಳಿಬಂದಿರುವ ಆರೋಪ ಸಾಬೀತಾದರೆ 18 ಕೋಟಿ ರೂ. ಕೊಡುವುದಾಗಿ ಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment