ರಾಷ್ಟ್ರ ಸುದ್ದಿ

ಆಕಾಶವಾಣಿಯಲ್ಲೂ #MeToo ಸದ್ದು, ಆರೋಪಿಸಿದವರ ಸೇವೆಯಿಂದ ವಜಾ

ಹೊಸದಿಲ್ಲಿ: #MeToo ಅಭಿಯಾನದ ಬಿಸಿ ಆಕಾಶವಾಣಿಗೂ (ಆಲ್ ಇಂಡಿಯಾ ರೇಡಿಯೋ) ತಟ್ಟಿದೆ. ಮಧ್ಯಪ್ರದೇಶದ ಶಾದೋಲ್ ರೇಡಿಯೋ ಕೇಂದ್ರದ ಒಂಬತ್ತು ಮಂದಿ ಮಹಿಳಾ ಉದ್ಯೋಗಿಗಳು ತಮಗಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ಸಹಾಯಕ ನಿರ್ದೇಶಕ (ಪ್ರೋಗ್ರಾಮಿಂಗ್) ರತ್ನಾಕರ್ ಭಾರತಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ ಒಂಬತ್ತು ಉದ್ಯೋಗಿಗಳು.

ಆದರೆ ಆರೋಪಿಯನ್ನು ವಿಚಾರಿಸುವುದಕ್ಕೆ ಬದಲಾಗಿ ಆರೋಪ ಮಾಡಿದ ಮಹಿಳಾ ಉದ್ಯೋಗಿಗಳನ್ನೇ ಸೇವೆಯಿಂದ ವಜಾಗೊಳಿಸಿ ಮನೆಗೆ ಕಳುಹಿಸಲಾಗಿದೆ. ಒಂದು ಕಡೆ ಮೀಟೂ ಅಭಿಯಾನ ದೇಶದಾದ್ಯಂತ ತೀವ್ರವಾಗಿದ್ದರೆ ಆಕಾಶವಾಣಿಯಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಒಂಬತ್ತು ಮಂದಿ ಉದ್ಯೋಗಿಗಳು ರತ್ನಾಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಎಐಆರ್ ಆಂತರಿಕ ವಿಚಾರಣಾ ಸಮಿತಿ ರತ್ನಾಕರ್‌ರನ್ನು ದೋಷಿ ಎಂದು ನಿರ್ಧರಿಸಿದೆ. ಆದರೂ ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಾರ್ಮಿಕ ಒಕ್ಕೂಟ ಆರೋಪಿಸಿದೆ. ರತ್ನಾಕರ್ ವಿರುದ್ಧ ಆರೋಪ ಮಾಡಿರುವ ಒಂಬತ್ತು ಮಂದಿ ಉದ್ಯೋಗಗಳನ್ನೇ ಕೆಲಸದಿಂದ ತೆಗೆದಿರುವುದು ವಿಪರ್ಯಾಸ ಎಂದಿದೆ. ಧರ್ಮಶಾಲಾ, ಓಬ್ರಾ, ಸಾಗರ್, ರಾಮ್‍ಪುರ್, ಕುರುಕ್ಷೇತ್ರ, ದಿಲ್ಲಿ ಕೇಂದ್ರಗಳಲ್ಲಿ ಸಹ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿವೆ. ಅದರೆ ಇಲ್ಲೂ ಸಹ ಇಂತಹದ್ದೇ ಕ್ರಮ ಮರುಕಳಿಸಿದೆ ಎಂಬುದು ಎಐಆರ್ ಕಾರ್ಮಿಕ ಒಕ್ಕೂಟದ ವಾದ. ಆರೋಪಿಗಳಿಗೆ ಸಣ್ಣಪುಟ್ಟ ಎಚ್ಚರಿಕೆ ನೀಡಿ ಬಿಡಲಾಗಿದೆ. ಅದೇ ರೀತಿ ಆಪಾದಿತರಿಗೆ ಕೆಲಸ ಬಿಡಬೇಕು ಎಂದು ಒತ್ತಡ ತಂದಿದ್ದಾಗಿ ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.

ಇನ್ನೊಂದು ಕಡೆ ಆಕಾಶವಾಣಿ ಪ್ರಧಾನ ನಿರ್ದೇಶಕ ಫಯಾಜ್ ಶೆಹರಿಯಾರ್‌ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪ್ರತಿ ದೂರನ್ನೂ ಆಂತರಿಕ ದೂರು ಸಮಿತಿ ವಿಚಾರಣೆ ನಡೆಸಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲೇ ಶಾದೋಲ್ ದೂರುಗಳನ್ನು ವಿಚಾರಿಸಿ ರತ್ನಾಕರ್ ಅವರನ್ನು ವರ್ಗ ಮಾಡಿದ್ದೇವೆ ಎಂದು ಫಯಾಜ್ ತಿಳಿಸಿದ್ದಾರೆ. ಆದರೆ ಸದ್ಯಕ್ಕೆ ಅವರು ಡಿಜಿ ಪ್ರಧಾನ ಕಾರ್ಯಾಲಯದಲ್ಲೇ ಇದ್ದಾರೆ ಎಂದಿವೆ ಮೂಲಗಳು. ಹಾಗೆಯೇ ಮಹಿಳಾ ಉದ್ಯೋಗಿಗಳನ್ನು ವಜಾಗೊಳಿಸಿರುವುದಕ್ಕೂ, ಲೈಂಗಿಕ ಕಿರುಕುಳ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಅವರ ವಾರ್ಷಿಕ ಕಾರ್ಯ ನಿರ್ವಹಣೆ ಸಾಮರ್ಥ್ಯದ ಆಧಾರವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕಾಶವಾಣಿ ಕಾರ್ಮಿಕ ಒಕ್ಕೂಟ, ಶಾದೋಲ್ ಜತೆಗೆ ಇತರೆ 6 ಕೇಂದ್ರಗಳಲ್ಲೂ ಕೇಳಿ ಬಂದಿರುವ ಲೈಂಗಿಕ ಕಿರುಕುಳ ದೂರಗಳ ಬಗ್ಗೆಯೂ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ. ಈಗಾಗಲೆ ಕೆಲಸದಿಂದ ವಜಾಗೊಳಿಸಿರುವ ಮಹಿಳಾ ನೌಕರರನ್ನು ಮತ್ತೆ ಕರ್ತವ್ಯಕ್ಕೆ ಪರಿಗಣಿಸಬೇಕೆಂದು ಪ್ರಸಾರಭಾರತಿ ಸಿಇಒ ಶಶಿಶೇಖರ್ ವೆಂಪಟ್ಟಿ ಅವರಿಗೆ ಪತ್ರ ಬರೆದಿದೆ.

About the author

ಕನ್ನಡ ಟುಡೆ

Leave a Comment