ರಾಜ್ಯ ಸುದ್ದಿ

ಆಕೆ ನನ್ನ ತಂಗಿ ಇದ್ದಂತೆ, ಅದೊಂದು ಆಕಸ್ಮಿಕ ಘಟನೆಯಷ್ಟೇ ದುರ್ವರ್ತನೆ ಅಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ತಮ್ಮನ್ನು ಪ್ರಶ್ನಿಸಿದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಆಕ್ರೋಶಕ್ಕೆ ತುತ್ತಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ಸಂಬಂಥ ಸ್ಪಷ್ಟನೆ ನೀಡಿದ್ದು, ಆಕೆ ನನ್ನ ತಂಗಿ ಇದ್ದಂತೆ, ಅದೊಂದು ಆಕಸ್ಮಿಕ ಘಟನೆಯಷ್ಟೇ ದುರ್ವರ್ತನೆ ಅಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಕೆಯನ್ನು ನಾನು ಕಳೆದ 15 ವರ್ಷಗಳಿಂದ ಬಲ್ಲೆ. ಆಕೆ ನನ್ನ ಸಹೋದರಿ ಇದ್ದಂತೆ. ಅದೊಂದು ಆಕಸ್ಮಿಕ ಘಟನೆಯಷ್ಟೇ.. ದುರ್ವರ್ತನೆ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ನಿನ್ನೆ ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮಾಜಿ ತಾ.ಪಂ. ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್​​ನ ಕಾರ್ಯಕರ್ತೆ ಜಮಾಲಾರ್ ಅವರು ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ನೀವೂ ಕೈಗೆ ಸಿಗಲ್ಲ. ಶಾಸಕರಾಗಿರುವ ನಿಮ್ಮ ಮಗನೂ ಕೈಗೆ ಸಿಗಲ್ಲ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳೋಣ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. ಅಲ್ಲದೆ ಮೇಜನ್ನು ಕುಟ್ಟಿ ಆಕ್ರೋಶಭರಿತರಾಗಿ ಮಾತನಾಡಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಸಿದ್ಧರಾಮಯ್ಯ ಅವರು ಮಹಿಳೆಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು, ‘ಕೂತ್ಕೋಳಮ್ಮ ಸಾಕು.. ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ… ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ…?’ ಎಂದು ಗದರಿಸಿದ್ದು, ಅದರ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

About the author

ಕನ್ನಡ ಟುಡೆ

Leave a Comment