ಕ್ರೀಡೆ

ಆತಿಥೇಯ ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ

ಇಪೋ (ಮಲೇಷ್ಯಾ): ಸಂಘಟಿತ ನಿರ್ವಹಣೆ ತೋರಿದ ಭಾರತ ತಂಡ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಜಯ ದಾಖಲಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ 4-2 ಗೋಲುಗಳಿಂದ ಆತಿಥೇಯ ಮಲೇಷ್ಯಾ ತಂಡವನ್ನು ಸೋಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಭಾರತ ಎರಡನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಕಳೆದ ಪಂದ್ಯದಲ್ಲಿ ಕೊರಿಯಾ ವಿರುದ್ಧ ಅಂತಿಮ ಕ್ಷಣದಲ್ಲಿ ಗೆಲುವು ಕೈಚೆಲ್ಲಿದ್ದ ಭಾರತ ಗೆಲುವಿನ ಹಳಿಗೇರಿತು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಕ್ವಾರ್ಟರ್​ನಲ್ಲಿ ಗೋಲು ರಹಿತ ಸಮಬಲ ಸಾಧಿಸಿದವು. ಎರಡನೇ ಕ್ವಾರ್ಟರ್​ನ ಆರಂಭಿಕ ನಿಮಿಷದಲ್ಲೇ ಮೇಲುಗೈ ಸಾಧಿಸಿ ಭಾರತ ಮುನ್ನಡೆ ಕಂಡುಕೊಳ್ಳಲು ಯಶಸ್ವಿಯಾಯಿತು. 17ನೇ ನಿಮಿಷದಲ್ಲಿ ಸುಮಿತ್ ಫೀಲ್ಡ್ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪ್ರತಿಯಾಗಿ ಮಲೇಷ್ಯಾದ ರಹೀಂ ರಾಜೀ (21ನೇ ನಿಮಿಷ) ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು.

ಕೆಲಹೊತ್ತಿನಲ್ಲೇ ಸುಮೀತ್ ಕುಮಾರ್ (27ನೇ ನಿಮಿಷ) ಫೀಲ್ಡ್ ಗೋಲಿನ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಭಾರತ ತಂಡ ಮೊದಲಾರ್ಧದಲ್ಲಿ 2-1 ರಿಂದ ಮುನ್ನಡೆ ಸಾಧಿಸಿತು. 3ನೇ ಕ್ವಾರ್ಟರ್​ನ ಮೊದಲ ನಿಮಿಷದಲ್ಲೇ ವರುಣ್ ಕುಮಾರ್ (36ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ತಂಡಕ್ಕೆ ಗೋಲು ತಂದುಕೊಟ್ಟರು. ಇದರಿಂದ 3-1 ರಿಂದ ಮುನ್ನಡೆ ಸಾಧಿಸಿದ ಭಾರತ ಗೆಲುವು ಖಚಿತಪಡಿಸಿಕೊಂಡಿತು. ಅಂತಿಮ ನಿಮಿಷಗಳಲ್ಲಿ ಒತ್ತಡಕ್ಕೊಳಗಾದ ಭಾರತ 57ನೇ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟಿತು. ಮರು ನಿಮಿಷದಲ್ಲೇ ಮಂದೀಪ್ ಸಿಂಗ್ (58) ಮತ್ತೊಂದು ಗೋಲು ಬಾರಿಸಿದರು. ಇದರಿಂದ ಭಾರತ ತಂಡ ಗೆಲುವಿನ ಅಂತರ ಹಿಗ್ಗಿಸಿಕೊಂಡಿತು.

About the author

ಕನ್ನಡ ಟುಡೆ

Leave a Comment