ಸುದ್ದಿ

ಆತ್ಮಹತ್ಯೆಗೆ ಯತ್ನ ನದಿಗೆ ಹಾರಿ

ಕಾರವಾರ:  ಕಾಳಿನದಿಗೆ ತನ್ನ ಒಂದು ಮಗುವನ್ನು ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ರಕ್ಷಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್‌ನ ಗಾರೆ ಕೆಲಸಗಾರ ಶಂಕರ ಬಂಜಾರ (40) ಆತ್ಮಹತ್ಯೆಗೆ ಯತ್ನಿಸಿದವರು. ಮಂಗಳವಾರ ರಾತ್ರಿ ಮಗುವಿನೊಂದಿಗೆ ನದಿಗೆ ಹಾರಿದ್ದ ಅವರನ್ನು ಹಾಗೂ ಮಗುವನ್ನು ದೇವಭಾಗ್ ಬೀಚ್ ರೆಸಾರ್ಟ್ ಸಿಬ್ಬಂದಿ ರಕ್ಷಿಸಿ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ವಿವಸ್ತ್ರನಾಗಿ ತಪ್ಪಿಸಿಕೊಂಡು ಬಂದು ಪುನಃ ನದಿಗೆ ಹಾರಿದರು. ನಂತರ ಈಜಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಯ ಕಂಬದ ಕಟ್ಟೆಯಲ್ಲಿ ಕುಳಿತುಕೊಂಡರು. ಸ್ಥಳೀಯರು ಎಷ್ಟೇ ಕೂಗಿ ಕರೆದರೂ ವಾಪಸ್ ಬರಲು ಒಪ್ಪದೇ ಮತ್ತೆ ನದಿಗೆ ಹಾರಲು ಮುಂದಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ದೋಣಿಯ ಮೂಲಕ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಮಗುವಿಗೆ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

About the author

ಕನ್ನಡ ಟುಡೆ

Leave a Comment