ರಾಜಕೀಯ

ಆಪರೇಷನ್‌ ಕಮಲದಲ್ಲಿ ಮೋದಿ, ಅಮಿತ್‌ ಷಾ ಭಾಗಿಯಾಗಿದ್ದಾರೆ: ಖರ್ಗೆ

ಕಲಬುರಗಿ: ಆಪರೇಷನ್‌ ಕಮಲದಲ್ಲಿ ರಾಜ್ಯ ನಾಯಕರು ಅಷ್ಟೆ ಅಲ್ಲ. ಪ್ರಧಾನಿ ಮೋದಿ, ಅಮಿತ್ ಷಾ ಕೂಡ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಬಿಡುಗಡೆ ಮಾಡಿದ ಬಿ.ಎಸ್. ಯಡಿಯೂರಪ್ಪ ಕುರಿತ ಆಡಿಯೋ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದಲ್ಲಿ ನಮ್ಮ ಕಾಂಗ್ರೆಸ್ ಶಾಸಕರು ಕೂಡ ಬದ್ಧರಾಗಿದ್ದಾರೆ. ಮೋದಿ – ಅಮಿತ್ ತಿಪ್ಪರಲಾಗ ಹಾಕಿದರೂ ಈ ಸರ್ಕಾರವನ್ನು ಏನು ಮಾಡಲು ಆಗುವುದಿಲ್ಲ. ಆಡಿಯೋ ಕುರಿತು ತನಿಖೆ ಆಗಬೇಕು. ಮುಂದೆ ಯಾರು ಇಂತಹ ತಪ್ಪು ದಾರಿಗೆ ಇಳಿಯಲು ಧೈರ್ಯ ಮಾಡುವುದಿಲ್ಲ. ಸ್ಪೀಕರ್ ಈ ವಿಚಾರವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಿದೆ. ಜತೆಗೆ ಎಸಿಬಿ ಕೂಡ ಇದನ್ನು ಗಂಭಿರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಬಿಜೆಪಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಚುನಾವಣೆ ಮುಂಚೆ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಿ ಚುನಾವಣೆಗೆ ಹೋಗುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರವನ್ನು ತೆಗೆದುಹಾಕಿ ನಿಮ್ಮ ಸರ್ಕಾರವನ್ನು ತರುವ ಹಳೆ ಚಾಳಿ ಬಿಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ನಲ್ಲಿ ಪ್ರಯತ್ನ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ. ಇವಾಗ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ. ಸಮ್ಮಿಶ್ರ ಸರ್ಕಾರದ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದಾರೆ. ಎಲ್ಲ ಶಾಸಕರಿಗೆ ಅಭಿನಂದಿಸುತ್ತೇನೆ. ಯಾಕೆಂದರೆ ಯಾವುದೇ ಆಮಿಷಕ್ಕೆ ಒಳಗಾಗುತ್ತಿಲ್ಲ ಎಂದರು.

About the author

ಕನ್ನಡ ಟುಡೆ

Leave a Comment