ರಾಜಕೀಯ

ಆಪರೇಷನ್‌ ವಿಫ‌ಲ: ಬಿಜೆಪಿ ಕನಸು ಚೂರು

ಬೆಂಗಳೂರು: ಸಂಪುಟ ಪುನಾರಚನೆಯಿಂದ ಉಂಟಾಗಿರುವ ಅಸಮಾಧಾನ ಹಾಗೂ ರಮೇಶ್‌ ಜಾರಕಿಹೊಳಿ ಬಂಡಾಯದಿಂದ ಆಪರೇಷನ್‌ ಕಮಲ ಮೂಲಕ ಅಧಿಕಾರ ಹಿಡಿಯಬಹುದು ಎಂಬ ಬಿಜೆಪಿ ಕನಸು ಮತ್ತೂಮ್ಮೆ ಭಗ್ನವಾಗಿದೆ. ರಮೇಶ್‌ ಜಾರಕಿಹೊಳಿ ಈಗ “ಏಕಾಂಗಿ’ಯಾಗಿದ್ದಾರೆ. ಸಚಿವ ಸ್ಥಾನ ಸಿಗದಿದ್ದರೆ ನಾವೂ ನಿಮ್ಮೊಂದಿಗೆ ಎಂದು ಹೇಳಿದ್ದ ಎಂಟು ಶಾಸಕರು ರಮೇಶ್‌ ಜಾರಕಿಹೊಳಿಗೆ ಕೈ ಕೊಟ್ಟಿದ್ದಾರೆ. ವಿದೇಶದಿಂದಲೇ ರಮೇಶ್‌ ಜಾರಕಿಹೊಳಿ ಸಂಪರ್ಕದಲ್ಲಿದ್ದ ಶಾಸಕರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಪರೇಟ್‌ ಮಾಡಿ ರಮೇಶ್‌ ಜಾರಕಿಹೊಳಿಗೆ ಶಾಕ್‌ ನೀಡಿದ್ದಾರೆ. ಹೀಗಾಗಿ, ಈ ಬಾರಿ ರಹಸ್ಯ ಕಾರ್ಯಾಚರಣೆ ಮೂಲಕ ಸಮ್ಮಿಶ್ರ ಸರ್ಕಾರ ಕೆಡವುವ ಕಾರ್ಯತಂತ್ರ ರೂಪಿಸಿದ್ದ ಬಿಜೆಪಿ ತಣ್ಣಗಾಗಿದೆ. 20 ಶಾಸಕರ ತಂಡದೊಂದಿಗೆ ಬಂದರೆ ಮಾತ್ರ ಚರ್ಚೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಡ್ಡಿ ಮುರಿದಂತೆ ಹೇಳಿದ್ದು, ರಮೇಶ್‌ ಜಾರಕಿಹೊಳಿ ಭೇಟಿಗೂ ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ.

ಅತ್ತ ಬಿಜೆಪಿಯವರ ವಿಶ್ವಾಸ ಗಳಿಸಲೂ ಆಗದೆ ಇತ್ತ ಸ್ವ ಪಕ್ಷ ಕಾಂಗ್ರೆಸ್‌ನವರ ವಿರೋಧ ಕಟ್ಟಿಕೊಂಡಂತಾಗಿರುವ ರಮೇಶ್‌ಜಾರಕಿಹೊಳಿ ಮುಂದಿನ ತೀರ್ಮಾನದ ಬಗ್ಗೆಯೇ ಗೊಂದಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಹೈಕಮಾಂಡ್‌ ತಮ್ಮನ್ನು ಕರೆದು ಮಾತನಾಡಿ ಸಮಾಧಾನ ಮಾಡಿದರೆ ಸಾಕು ಎಂದು ಕಾಯುತ್ತಿದ್ದು ತಮ್ಮ ಆಪ್ತರ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಆಗಿದ್ದೇನು?: ಸಂಪುಟದಿಂದ ತಮ್ಮನ್ನು ಕೈ ಬಿಟ್ಟ ನಂತರ ರಮೇಶ್‌ಜಾರಕಿಹೊಳಿ ಅವರು ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ನಾಗೇಂದ್ರ, ಆನಂದ್‌ಸಿಂಗ್‌, ಪ್ರತಾಪಗೌಡ ಪಾಟೀಲ್‌, ಮಹೇಶ್‌ ಕುಮಟಳ್ಳಿ, ಬಿ.ಸಿ.ಪಾಟೀಲ್‌ ಅವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ
ಬಿಜೆಪಿ ನಾಯಕರ ಸಂಪರ್ಕಕ್ಕೆ ಯತ್ನಿಸಿದ್ದರು. ಬಿಜೆಪಿಯ ಕೆಲವು ನಾಯಕರು ದೆಹಲಿಯಿಂದಲೇ ಐದು ಶಾಸಕರನ್ನು ಸಂಪರ್ಕಿಸಿ ರಮೇಶ್‌ಜಾರಕಿಹೊಳಿ ಅವರ ಜತೆ 15 ಶಾಸಕರಿದ್ದಾರೆ. ಸರ್ಕಾರ ಉಳಿಯುವುದಿಲ್ಲ, ಬರುವುದಾದರೆ ಬಂದು ಬಿಡಿ ಹಣದ ಬಗ್ಗೆಯೂ
ಯೋಚನೆ ಬೇಡ ಎಂದು ಮಾತನಾಡಿದ್ದರು. ಈ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ವಿದೇಶದಿಂದಲೇ ರಮೇಶ್‌ ಜಾರಕಿ ಹೊಳಿ ಜತೆಗಿರುವ ಶಾಸಕರ ಜತೆ ಸಂಪರ್ಕ ಸಾಧಿಸಿ ಯಾರೂ ಹೋಗದಂತೆ ತಡೆ ಹಿಡಿದರು.

ಜತೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡಿದ್ದ ಕಾಂಗ್ರೆಸ್‌ ಶಾಸಕರ ಜತೆ ಮಾತನಾಡಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡಿದ್ದರು. ರಮೇಶ್‌ ಜಾರಕಿಹೊಳಿ ಸಂಪರ್ಕದಲ್ಲಿದ್ದ ಶಾಸಕರ ಜತೆ ಮಾತನಾಡಿದಾಗಲೇ 25ರಿಂದ 30 ಕೋಟಿ ರೂ. ಆಫ‌ರ್‌ ವಿಚಾರ ತಿಳಿಯಿತು.  ಹಾಗಾಗಿಯೇ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರ ಖರೀದಿಗೆ ಯತ್ನಿಸುತ್ತಿರುವ ಬಗ್ಗೆ ಬಹಿರಂಗ ಆರೋಪ ಮಾಡಿದರು. ರಹಸ್ಯ ಕಾರ್ಯತಂತ್ರ ಮೂಲಕ ಸಮ್ಮಿಶ್ರ ಸರ್ಕಾರ ಕೆಡವುವ ಬಿಜೆಪಿಯ ಕಾರ್ಯಚರಣೆ ಮಾಹಿತಿ ಬಹಿರಂಗಗೊಂಡಿದ್ದರಿಂದ ಕೇಂದ್ರ ಬಿಜೆಪಿ ನಾಯಕರು ರಾಜ್ಯ ನಾಯಕರ ವಿರುದ್ಧ ಗರಂ ಆಗಿದ್ದಾರೆ. ಎಂದು ಹೇಳಲಾಗಿದೆ. ಸಂಕ್ರಾಂತಿ ನಂತರ 20 ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಅದು ಶೇ.100ರಷ್ಟು ಖಾತರಿಯಾದರೆ ಮಾತ್ರ ಪರ್ಯಾಯ ಸರ್ಕಾರ ರಚನೆಗೆ ಮುಂದಾಗೋಣ. ಇಲ್ಲದಿದ್ದರೆ ಲೋಕಸಭೆ ಚುನಾವಣೆವರೆಗೂ ಆ ಸಹವಾಸ ಬೇಡ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಅಮಿತ್‌ ಶಾಗೆ ವಿಶ್ವಾಸವಿಲ್ಲ : ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 20 ಶಾಸಕರನ್ನು ಸೆಳೆಯುವ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ರಾಜ್ಯ ನಾಯಕರ ಬಗ್ಗೆ ಅಮಿತ್‌ ಶಾಗೆ ವಿಶ್ವಾಸವಿಲ್ಲ. ಪ್ರಧಾನಿ ಮೋದಿ ಸಮ್ಮಿಶ್ರ ಸರ್ಕಾರ ಕೆಡುವುವ ಬಗ್ಗೆ ಆಸಕ್ತಿ ಹೊಂದಿಲ್ಲ. ಇಬ್ಬರೂ ಲೋಕಸಭೆ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಿದ್ದಾರೆ. ಹೀಗಾಗಿ, 20 ಶಾಸಕರು ಸ್ವಯಂ ಪ್ರೇರಿತರಾಗಿ ಮುಂದಾಗದ ಹೊರತು ಲೋಕಸಭೆ ಚುನಾವಣೆವರೆಗೂ ಆತುರದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

 

 

About the author

ಕನ್ನಡ ಟುಡೆ

Leave a Comment