ರಾಜಕೀಯ

ಆಪರೇಷನ್ ಕಮಲ ವಿಫಲ, ಬೆಂಗಳೂರಿನತ್ತ ಅತೃಪ್ತ ಶಾಸಕರು

ಬೆಂಗಳೂರು: ಬಿಜೆಪಿ ಪಕ್ಷದ ಆಪರೇಷನ್ ಕಮಲ ವಿಫಲವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಗುರುಗ್ರಾಮದಿಂದ ಬೆಂಗಳೂರಿನತ್ತ ವಾಪಸ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ರೆಸಾರ್ಟ್​ ರಾಜಕೀಯ ಅಂತಿಮ ಘಟ್ಟ ತಲುಪಿದ್ದು, ಆಪರೇಷನ್ ಕಮಲ ಮಾಡಿಯೇ ತೀರುತ್ತೇವೆ ಎಂದು ಹರಿಯಾಣದ ಗುರುಗ್ರಾಮ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರು ಮತ್ತು ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ ಎಂದು ಪಣತೊಟ್ಟಿದ್ದ ಕೈ ಅತೃಪ್ತ ಶಾಸಕರು ಯಾವುದೂ ಸಾಕಾರಗೊಳ್ಳದ ಕಾರಣ ಒಬ್ಬೊಬ್ಬರಾಗಿ ದೆಹಲಿ, ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಆಪರೇಷನ್ ಕಮಲ ಮಾಡಲು ಹೋಗಿ ಎಡವುತ್ತಲೇ ಇರುವ ಬಿಜೆಪಿ ಮತ್ತೆ ಆಪರೇಷನ್ ಕಮಲದಿಂದ ಕೈ ಸುಟ್ಟುಕೊಂಡಿದೆ. ಪಕ್ಷದ ಶಾಸಕರಿಗೆ ಯಾವುದೇ ಸೂಚನೆ ನೀಡದೆ, ಅವರನ್ನೆಲ್ಲಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿಸಿದ್ದ ಬಿ.ಎಸ್​.ಯಡಿಯೂರಪ್ಪ ಅವರು ಶಾಸಕರಿಗೆ ಯಾವೊಂದು ಸೂಚನೆಯನ್ನು ನೀಡಿರಲಿಲ್ಲ. ಅಲ್ಲಿದ್ದ ಶಾಸಕರಿಗೂ ಏನಾಗುತ್ತಿದೆ ಎಂಬ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಇದೀಗ ಆಪರೇಷನ್ ಕಮಲ ಹಳ್ಳ ಹಿಡಿದ ಹಿನ್ನೆಲೆಯಲ್ಲಿ ಒಬ್ಬೊಬ್ಬರಾಗಿ ರೆಸಾರ್ಟ್​ನಿಂದ ಜಾಗ ಖಾಲಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ರೆಸಾರ್ಟ್ ನಲ್ಲಿದ್ದ ಬೊಮ್ಮಾಯಿ, ಹಾಗೂ ಶ್ರೀರಾಮುಲು ಅವರೂ ಕೂಡ ಅಲ್ಲಿಂದ ತೆರಳಿದ್ದು, ಯಡಿಯೂರಪ್ಪ ಅವರು ಅಲ್ಲಿ ಇಲ್ಲದ ಕಾರಣಕ್ಕೆ ವಿಶ್ವಾಸ ಕಳೆದುಕೊಂಡ ಶಾಸಕರು ಹೋಟೆಲ್​ನಿಂದ ಹೊರಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಇನ್ನು ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಹೋಟೆಲ್ ನಲ್ಲಿರುವ ಶಾಸಕರೆಲ್ಲ ಒಂದೇ ಬಾರಿಗೆ ಹೊರಗೆ ಬಂದರೆ ಮಾಧ್ಯಮದ ಮುಂದೆ ಏನು ಹೇಳುತ್ತಾರೋ ಎಂಬ ಭಯದಲ್ಲಿದ್ದಾರೆ. ಅದಕ್ಕಾಗಿಯೇ ಅಲ್ಲಿರುವ ಯಾವ ಶಾಸಕರಿಗೆ ಅಲ್ಲಿಂದ ಹೊರಡಬೇಕೇ, ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ಸೂಚನೆ ನೀಡಿಲ್ಲ ಎನ್ನಲಾಗುತ್ತಿದೆ.
ಶಾಸಕಾಂಗ ಸಭೆಗೆ ಗೈರಾದರೆ ಕಠಿಣ ಕ್ರಮ: ರೆಬೆಲ್ ಶಾಸಕರಿಗೆ ಕೆಪಿಸಿಸಿ ಎಚ್ಚರಿಕೆ
ಇನ್ನು ರೆಬೆಲ್ ಶಾಸಕರು ಬೆಂಗಳೂರಿನತ್ತ ಮುಖ ಮಾಡಲು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ಶಾಸಕಾಂಗ ಪಕ್ಷದ ಸಭೆಗೆ ಗೈರಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ರೆಬೆಲ್ ಶಾಸಕರು ಬೆಚ್ಚಿ ಬೀಳುವಂತೆ ಮಾಡಿದೆ. ಒಂದು ವೇಳೆ ಸಿಎಲ್ ಪಿ ಸಭೆಯಲ್ಲಿ ಪಾಲ್ಗೊಳ್ಳದೇ ಹೋದರೆ ತಮ್ಮ ಶಾಸಕ ಸ್ಥಾನಕ್ಕೇ ಕುತ್ತು ಬರುತ್ತದೆ ಎಂಬ ಕಾರಣಕ್ಕಾಗಿ ರೆಬೆಲ್ ಶಾಸಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment