ರಾಜ್ಯ ಸುದ್ದಿ

ಆಯುಧ ಪೂಜೆ ದಿನ, ಗನ್‌, ಪಿಸ್ತೂಲ್‌, ರಿವಾಲ್ವಾರ್‌ ಗೆ ಪೂಜೆ: ಮುತ್ತಪ್ಪ ರೈಗೆ ಸಿಸಿಬಿ ನೋಟಿಸ್‌

ಬೆಂಗಳೂರು: ಆಯುಧ ಪೂಜೆ ದಿನ ತಮ್ಮ ರಕ್ಷಣೆಗೆ ನೀಡಲಾಗಿದ್ದ ಗನ್‌, ಪಿಸ್ತೂಲ್‌, ರಿವಾಲ್ವಾರ್‌, ಡ್ಯಾಗರ್‌ ಗೆ ಪೂಜೆ ಮಾಡಿದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರಿಗೆ ಶುಕ್ರವಾರ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.
ಮುತ್ತಪ್ಪ ರೈ ಅವರು ಗನ್‌, ಪಿಸ್ತೂಲ್‌, ರಿವಾಲ್ವಾರ್‌ ಗೆ ಪೂಜೆ ಮಾಡಿದ ವಿಡಿಯೋ ಮತ್ತು ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಸಿಬಿ ಪೊಲೀಸರು, ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್ ಕಳುಹಿಸಿದ್ದಾರೆ. ನೋಟಿಸ್‌ ಸ್ವೀಕರಿಸಿದ 24 ತಾಸಿನೊಳಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿವರಣೆ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ವಿವರಣೆ ಕೋರಿ ನಾವು ಮುತ್ತಪ್ಪ ರೈಗೆ ನೋಟಿಸ್ ನೀಡಿದ್ದೇವೆ. ಆದರೆ ಅವರು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಅಪರಾಧ) ಅಲೋಕ್ ಕುಮಾಕ್ ಅವರು ಹೇಳಿದ್ದಾರೆ.
ಅ.18ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಗಳಲ್ಲಿ , ನೀವು ಒಂದು ಸ್ಥಳದಲ್ಲಿ ವಾಹನ ನಿಲ್ಲಿಸಿ ಅದರ ಮುಂದೆ ಆಯುಧಗಳನ್ನು ಅಪಾಯಕಾರಿ ರೀತಿಯಲ್ಲಿ ಪ್ರದರ್ಶಿಸಿದ್ದೀರಿ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿ ಬೆಂಗಳೂರಿನ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದೀರಿ. ನೀವು ಎಲ್ಲ ಆಯುಧಗಳು, ಅವುಗಳಿಗೆ ಸಂಬಂಧಪಟ್ಟ ಮೂಲ ದಾಖಲೆಗಳೊಂದಿಗೆ ತಪ್ಪದೇ ಹಾಜರಾಗಬೇಕು ಎಂದು ಸಿಸಿಬಿ ಸಂಘಟಿತ ಅಪರಾದ ದಳದ ಎಸಿಪಿ ವಿ.ಮರಿಯಪ್ಪ ನೋಟಿಸ್‌ ನೀಡಿದ್ದಾರೆ. ಫೋಟೋದಲ್ಲಿ ಚಾಪೆಯ ಮೇಲೆ ಶಸ್ತ್ರಾಸ್ತ್ರಗಳು, ಆಯುಧಗಳನ್ನು ಪ್ರದರ್ಶನಕ್ಕೆ ಇಟ್ಟು ವಿಭೂತಿ ಕುಂಕುಮ ಹಚ್ಚಿ ಪೂಜೆ ಮಾಡಲಾಗಿದೆ. ಅದರಲ್ಲಿ ಮುತ್ತಪ್ಪ ರೈ, ಇತರರು ಹಾಗೂ ಒಬ್ಬ ಮಹಿಳೆ ಇದ್ದಾರೆ.

About the author

ಕನ್ನಡ ಟುಡೆ

Leave a Comment