ರಾಜ್ಯ ಸುದ್ದಿ

ಆಯುಷ್ಮಾನ್ ಕರ್ನಾಟಕ: ಸರ್ವರಿಗೂ ಸಿಗಲಿದೆ ಸೌಲಭ್ಯ

ಬೆಂಗಳೂರು: ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷಿ ‘ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ (ಎಬಿ-ಎಆರ್‌ಕೆ) ಯೋಜನೆಗೆ ರಾಜ್ಯ ಸರಕಾರ ಚಾಲನೆ ನೀಡಿದೆ. ಇದರಡಿ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಹಾಗೂ ಎಪಿಎಲ್‌ ಕುಟುಂಬಗಳಿಗೆ ವಾರ್ಷಿಕ 1.50 ಲಕ್ಷ ರೂ. ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ.

ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಮತ್ತು ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ನ್ನು ಸಂಯೋಜಿತಗೊಳಿಸಿ ರೂಪಿಸಿದ ಹೊಸ ಯೋಜನೆಯಡಿ ರಾಜ್ಯದ ಎಲ್ಲ ಕುಟುಂಬಗಳಿಗೆ ಆರೋಗ್ಯ ಸೌಲಭ್ಯಗಳು ದೊರೆಯಲಿದೆ. ಸಂಯೋಜಿತ ಎಬಿ-ಎಆರ್‌ಕೆ ಯೋಜನೆಗೆ ಅಕ್ಟೋಬರ್‌ 30ರಂದು ಒಡಂಬಡಿಕೆ ನಡೆದಿದ್ದು, ಈಗಾಗಲೇ ಹಲವಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ವಿವರಗಳನ್ನು ವೈದ್ಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ನೀಡಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ರಾಜ್ಯದ 62 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಚಿಕಿತ್ಸೆ ದೊರೆಯಲಿದೆ. ಇದರಲ್ಲಿ ಶೇ. 60ರಷ್ಟು ಹಣವನ್ನು ಕೇಂದ್ರ ಸರಕಾರ ನೀಡಲಿದ್ದರೆ, ಉಳಿದ ಶೇ. 40ರಷ್ಟನ್ನು ರಾಜ್ಯ ಸರಕಾರ ಭರಿಸಲಿದೆ. ರಾಜ್ಯದಲ್ಲಿ ಒಟ್ಟು 115 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಆರೋಗ್ಯ ಯೋಜನೆ ಅನ್ವಯವಾಗಲಿದ್ದು, ಉಳಿದ 53 ಲಕ್ಷ ಬಿಪಿಎಲ್‌ ಕಾರ್ಡ್‌ದಾರರ ಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ. ಜತೆಗೆ 19 ಲಕ್ಷ ಎಪಿಎಲ್‌ ಕುಟುಂಬದವರ ಚಿಕಿತ್ಸೆಗೆ ನಿಗದಿಯಾದ ಪೂರ್ಣ ಮೊತ್ತವನ್ನು ರಾಜ್ಯ ಸರಕಾರವೇ ನೀಡಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ಒಟ್ಟಾರೆಯಾಗಿ 1.15 ಕೋಟಿ ಬಿಪಿಎಲ್‌ ಹಾಗೂ 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ ಈ ಯೋಜನೆಯ ಲಾಭ ಪಡೆಯುವ ಅರ್ಹತೆಯಿದೆ. ಚಿಕಿತ್ಸೆ ಉದ್ದೇಶಕ್ಕೆ 385 ಸರಕಾರಿ, 531 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದರಡಿ ಒಟ್ಟು 1,640 ಚಿಕಿತ್ಸೆಗಳು ಲಭ್ಯವಿರುತ್ತವೆ.

ಯಶಸ್ವಿನಿ ಇನ್ನು ಇಲ್ಲ: ಆರೋಗ್ಯ ಕರ್ನಾಟಕ ಜಾರಿಯಾದಾಗಿನಿಂದ ಈವರೆಗೆ 1.49 ಲಕ್ಷ ಕುಟುಂಬಗಳಿಗೆ ಚಿಕಿತ್ಸೆ ಸೌಲಭ್ಯ ದೊರಕಿದೆ. ಇದಲ್ಲದೆ ಆಯುಷ್ಮಾನ್‌ ಭಾರತ್‌ನೊಂದಿಗೆ ಆರೋಗ್ಯ ಕರ್ನಾಟಕವು ಸಂಯೋಜಿತ ರೂಪದಲ್ಲಿ ಜಾರಿಗೊಂಡಿದ್ದರಿಂದ ಯಶಸ್ವಿನಿ ಸೇರಿದಂತೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಇತರ ಆರೋಗ್ಯ ಯೋಜನೆಗಳು ರದ್ದಾದಂತಾಗಿವೆ. ಅಂದರೆ ಇಂತಹ ನಾನಾ ಯೋಜನೆಗಳು ಎಬಿ-ಎಆರ್‌ಕೆ ಅಡಿ ಬಂದಂತಾಗಲಿದೆ.

About the author

ಕನ್ನಡ ಟುಡೆ

Leave a Comment