ತಂತ್ರಜ್ಞಾನ

ಆರು ಸಾಧಕರಿಗೆ ಇನ್ಫೋಸಿಸ್‌ ವಿಜ್ಞಾನ ಪ್ರಶಸ್ತಿ

ಬೆಂಗಳೂರು: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಸಲುವಾಗಿ ಇನ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನ ನೀಡುವ 2018ನೇ ಸಾಲಿನ ಪ್ರತಿಷ್ಠಿತ ‘ಇನ್ಫೋಸಿಸ್‌ ಬಹುಮಾನ’ಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕರಾದ ಪ್ರೊ.ನವಕಾಂತ್‌ ಭಟ್‌, ಪ್ರೊ.ಎಸ್‌.ಕೆ.ಸತೀಶ್‌ ಸೇರಿದಂತೆ ಆರು ಮಂದಿ ಸಾಧಕರು ಭಾಜನರಾಗಿದ್ದಾರೆ. ಲೆಕ್ಟ್ರಾನಿಕ್‌ಸಿಟಿಯ ಇನ್ಫೋಸಿಸ್‌ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ ಹಾಗೂ ಇನ್ಫೋಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್‌ ಅವರು ಬಹುಮಾನಕ್ಕೆ ಪಾತ್ರರಾಗಿರುವ ಗಣ್ಯರ ಹೆಸರನ್ನು ಪ್ರಕಟಿಸಿದರು.

ಒಟ್ಟು ಆರು ವಿಭಾಗಗಳಲ್ಲಿ ಇನ್ಫೋಸಿಸ್‌ ಬಹುಮಾನ ಪ್ರಕಟಿಸಲಾಗಿದೆ. ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಐಐಎಸ್‌ಸಿಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ.ನವಕಾಂತ ಭಟ್‌ ಅವರು ಬಹುಮಾನಕ್ಕೆ ಭಾಜನರಾಗಿದ್ದಾರೆ. ಐಐಎಸ್‌ಸಿಯಲ್ಲಿ ಸೆಂಟರ್‌ ಫಾರ್‌ ನ್ಯಾನೋ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ ವಿಭಾಗದ ಅಧ್ಯಕ್ಷ ರಾಗಿರುವ ನವಕಾಂತ್‌ ಭಟ್‌, ಬಯೊಕೆಮಿಸ್ಟ್ರಿಯಲ್ಲಿ ಬಯೊಸೆನ್ಸಾರ್‌ ಅಭಿವೃದ್ಧಿ ಕುರಿತು ನಡೆಸಿರುವ ಸಂಶೋಧನೆ ಮತ್ತು ಗ್ಯಾಸೋಯಸ್‌ ಸೆನ್ಸಾರ್‌ಗಳ ಅಭಿವೃದ್ಧಿ ಮೂಲಕ ಮೆಟಲ್‌ ಆಕ್ಸೈಡ್‌ ಸೆನ್ಸಾರ್‌ ಮೇಲೆ ಕೈಗೊಂಡಿರುವ ಸಂಶೋಧನೆಗಾಗಿ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಮಾನವಿಕ ವಿಜ್ಞಾನ ವಿಭಾಗದಲ್ಲಿ ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಆರ್ಟ್ಸ್ ಆ್ಯಂಡ್‌ ಆಸ್ತೆಟಿಕ್ಸ್‌ ವಿಭಾಗದ ಪ್ರಾಧ್ಯಾಪಕಿ ಹಾಗೂ ಡೀನ್‌ ಆಗಿರುವ ಪ್ರೊ.ಕವಿತಾ ಸಿಂಗ್‌ ಅವರು ಆಯ್ಕೆಯಾಗಿದ್ದಾರೆ. ಇವರು, ಮೊಘಲರ ಸಾಮ್ರಾಜ್ಯ, ರಜಪೂತರು ಮತ್ತು ಡೆಕ್ಕನ್‌ ಕಲೆಗಳನ್ನು ಆಳವಾಗಿ ಅಧ್ಯಯನ ಮಾಡಿರುವುದರ ಜತೆಗೆ ಐತಿಹಾಸಿಕ ಕಾರ್ಯಕ್ರಮಗಳ ಸಂಶೋಧನಾ ಬರಹಗಳು, ವಸ್ತು ಸಂಗ್ರಹಾಲಯಗಳ ಪಾತ್ರ ಕುರಿತ ಸಮಗ್ರ ಅಧ್ಯಯನ ನಡೆಸಿದ್ದಾರೆ. ಜೀವ ವಿಜ್ಞಾನ ವಿಭಾಗದಲ್ಲಿ ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ ಅಸೋಸಿಯೇಟ್‌ನ ಪ್ರೊ.ರೂಪ್‌ ಮಲ್ಲಿಕ್‌ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಮಾಲಿಕ್ಯೂಲರ್‌ ಮೋಟರ್‌ ಪ್ರೋಟಿನ್‌ಗಳ ಜೀವಂತ ಕಣಗಳು ಸಕ್ರಿಯವಾಗಿರುವಂತೆ ಮಾಡುವಲ್ಲಿ ಕೈಗೊಂಡಿರುವ ಸಂಶೋದನೆಗೆ ಅವರಿಗೆ ಬಹುಮಾನ ನೀಡಲಾಗುತ್ತಿದೆ.

ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ ವಿಶ್ವವಿದ್ಯಾಲಯದ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡಿ ಪ್ರಾಧ್ಯಾಪಕಿ ಹಾಗೂ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷೆ ನಳಿನಿ ಅನಂತರಾಮನ್‌ಗೆ ಬಹುಮಾನ ಘೋಷಿಸಲಾಗಿದೆ. ‘ಕ್ವಾಂಟಮ್‌ ಕೆಯಾಸ್‌’ ವಿಚಾರದಲ್ಲಿ ಅವರು ನಡೆಸಿರುವ ಸಂಶೋಧನೆಗಾಗಿ ಈ ಬಹುಮಾನ ನೀಡಲಾಗಿದೆ.
ಫಿಸಿಕಲ್‌ ಸೈನ್ಸಸ್‌ ವಿಭಾಗದಲ್ಲಿ ಐಐಎಸ್‌ಸಿಯಲ್ಲಿ ಸೆಂಟರ್‌ ಫಾರ್‌ ಅಟ್‌ಮಾಸ್ಫಿಯರಿಕ್‌ ಆ್ಯಂಡ್‌ ಓಜೋನಿಕ್‌ ಸೈನ್ಸಸ್‌ ವಿಭಾಗದ ಪ್ರೊ.ಎಸ್‌.ಕೆ.ಸತೀಶ್‌ಅವರಿಗೆ ಬಹುಮಾನ ಲಭಿಸಿದೆ. ಇಂಗಾಲ ಡೈಆಕ್ಸೈಡ್‌ನಿಂದಾಗಿ ಹವಾಮಾನದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತ ಸಂಶೋಧನೆಗಾಗಿ ಬಹುಮಾನವನ್ನು ಘೋಷಿಸಲಾಗಿದೆ. ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಪ್ರೊ.ಸೆಂಥಿಲ್‌ ಮುಲ್ಲೈನಾಥನ್‌ ಅವರು ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಕಂಪ್ಯೂಟೇಷನ್‌ ಅಂಡ್‌ ಬಿಹೇವಿಯರಲ್‌ ಸೈನ್ಸ್‌ನ ಪ್ರಾಧ್ಯಾಪಕರಾಗಿರುವ ಇವರು, ಜಾರ್ಜ್‌ ಸಿ. ಟಿಯಾಒ ಫ್ಯಾಕಲ್ಟಿ ಫೆಲೋ ಆಗಿದ್ದಾರೆ. ಬಿಹೇವಿಯರಲ್‌ಎಕನಾಮಿಕ್ಸ್‌ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಅವರಿಗೆ ಪ್ರಸಕ್ತ ಸಾಲಿನ ಇನ್ಫೋಸಿಸ್‌ ಬಹುಮಾನ ಲಭಿಸಿದೆ.

ಬಹುಮಾನಗಳನ್ನು ಘೋಷಣೆ ಮಾಡಿ ಮಾತನಾಡಿದ ಇನ್ಫೋಸಿಸ್‌ ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣಮೂರ್ತಿ, ”ವಿಜ್ಞಾನ ಮತ್ತು ಸಂಶೋಧನೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಬಹುಮಾನಗಳನ್ನು ನೀಡಲಾಗುತ್ತಿದೆ. ಯುವ ಜನರು ಭಾರತದ ಭವಿಷ್ಯವಾಗಿದ್ದು, ಅವರಲ್ಲಿರುವ ಪ್ರತಿಭೆಯನ್ನು ಸರಿಯಾಗಿ ಗುರ್ತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ತಪ್ಪಿದರೆ ಮುಂಬರುವ ದಿನಗಳಲ್ಲಿ ವಿಜ್ಞಾನದಲ್ಲಿ ಭಾರತಕ್ಕೆ ಉತ್ತಮ ಭವಿಷ್ಯ ಇರಲಾರದು,” ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್‌, ”ಸಂಶೋಧಕರಿಗೆ ಸೂಕ್ತ ಸಂದರ್ಭದಲ್ಲಿ ಉತ್ತೇಜನ ನೀಡಿದರೆ ಅವರ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಹಾಗಾಗಿ ಕಳೆದ ಹತ್ತು ವರ್ಷಗಳಿಂದ ಇನ್ಫೋಸಿಸ್‌ ಪ್ರತಿಷ್ಠಾನದ ವತಿಯಿಂದ ಬಹುಮಾನ ನೀಡಲಾಗುತ್ತಿದೆ. ಬಹುಮಾನ ವಿಜೇತರು ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಮಾಜ ಮತ್ತು ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment