ರಾಜ್ಯ ಸುದ್ದಿ

ಆರೋಗ್ಯಯುತ ಸಮಾಜಕ್ಕಾಗಿ ಶೌಚಾಲಯ ನಿರ್ಮಿಸಿ: ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌

ಯಾದಗಿರಿ: ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ವೈಯಕ್ತಿಕ ಶೌಚಾಲಯ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು. ನಗರದ ಕೇಂದ್ರ ಗ್ರಂಥಾಲಯ ಬಳಿ ಮಂಗಳವಾರ ನಗರಸಭೆ ವತಿಯಿಂದ ಸಾರ್ವಜನಿಕರ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸುತ್ತಮುತ್ತಲಿನ ವಾತಾವರಣ ಸ್ವತ್ಛವಾಗಿ ಇಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದರು.

ಜಿಲ್ಲಾಧಿಕಾರಿಗಳು ಕೂಡ ಸಾರ್ವಜನಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆ ಪರಿಹರಿಸುವಂತೆ ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ಸೂಚಿಸಿದರು. ನಗರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಗ್ರಂಥಾಲಯ ಸಹಾಯಕ ಬಸನಗೌಡ ಪಾಟೀಲ, ನಿಂಗಮ್ಮ, ಪ್ರಥಮ ದರ್ಜೆ ಸಹಾಯಕ ಗೌತಮ್‌, ದ್ವಿತೀಯ ದರ್ಜೆ ಸಹಾಯಕ ಎಂ.ಎನ್‌. ಪಟೇಲ್‌, ಸಿಬ್ಬಂದಿ ಭಾಗ್ಯಶ್ರೀ, ಖಾಸಿಂ ಹಾಗೂ ಸ್ಥಳೀಯರಾದ ಭೀಮರಾಯ ನಾಟೇಕಾರ, ಬಸವರಾಜ ಹಾಲಿಗೇರಾ, ಸಿದ್ರಾಮಪ್ಪ ನಾಟೇಕಾರ ಸೇರಿದಂತೆ ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

 

About the author

ಕನ್ನಡ ಟುಡೆ

Leave a Comment