ದೇಶ ವಿದೇಶ

ಆರ್‌ಬಿಐ-ಸರಕಾರದ ಬಾಂಧವ್ಯ ಬದಲಿಸಿದ ಬೋರ್ಡ್ ಮೀಟಿಂಗ್

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ನಡುವಣ ಬಿಕ್ಕಟ್ಟು ಸದ್ಯಕ್ಕೆ ಕೊನೆಗೊಂಡಿರುವುದೇನೋ ನಿಜ. ಸೋಮವಾರದ ಬೋರ್ಡ್‌ ಮೀಟಿಂಗ್‌ನಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಆರ್ಥಿಕ ಸಹಕಾರ ಒದಗಿಸಲು ಆರ್‌ಬಿಐ ನಿರ್ಧರಿಸಿದೆ. ಆದರೆ ಸರಕಾರ ಮತ್ತು ಆರ್‌ಬಿಐ ನಡುವಣ ಐತಿಹಾಸಿಕ ಸಂಘರ್ಷದ ಬಳಿಕ ಅಧಿಕಾರದ ಸಮತೋಲನ ಬದಲಾಗಿದೆ. ಇನ್ನು ಮುಂದೆ ಆರ್‌ಬಿಐ ನಿರ್ದೇಶಕ ಮಂಡಳಿಯ ಸಲಹೆಗಳು ಮತ್ತು ನಿರೀಕ್ಷೆಗಳಿಗೆ ಹೆಚ್ಚು ಸಹಾನುಭೂತಿಯಿಂದ ಸ್ಪಂದಿಸಬೇಕಾಗುತ್ತದೆ. ಬಾಹ್ಯ ನಿರ್ದೇಶಕರು (ಇಬ್ಬರು ಸರಕಾರಿ ನಾಮ ನಿರ್ದೇಶಿತರು ಸೇರಿದಂತೆ 13 ಮಂದಿ) ಆರ್‌ಬಿಐ ಗವರ್ನರ್‌ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ಕೇಂದ್ರ ಬ್ಯಾಂಕು ಈಗ ನಿರ್ದೇಶಕ ಮಂಡಳಿಯ ಅಡಿ ಕಾರ್ಯನಿರ್ವಹಿಸುತ್ತಿದೆಯೆ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಮಂಡಳಿಯ ಬಾಹ್ಯ ಸದಸ್ಯರನ್ನು ಸರಕಾರ ಆಯ್ಕೆ ಮಾಡುತ್ತದೆ. ಸರಕಾರದ ಆರ್ಥಿಕ-ರಾಜಕೀಯ ಕಳಕಳಿಗಳು ಆರ್‌ಬಿಐ ಸ್ವಾಯತ್ತೆಯನ್ನು ಕಟ್ಟಿಹಾಕುವುದೆ? ಆರ್‌ಬಿಐನ ಮಾಜಿ ಗವರ್ನರ್‌ಗಳು, ಅಧಿಕಾರಿಗಳು, ನೀತಿ ನಿರೂಪಕರು ಮತ್ತು ರಾಜಕಾರಣಿಗಳ ನಡುವಣ ಚರ್ಚೆಗಳನ್ನು ಗಮನಿಸಿದರೆ, ಆರ್‌ಬಿಐ ಸರಕಾರದ ನೀತಿಗೆ ಮಣಿದಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ‘ಮೂಲಭೂತ ಬದಲಾವಣೆ’ ಯಾಗಿದೆಯೇ ಎಂಬ ಪ್ರಶ್ನೆಗೆ ಮಾಜಿ ಗವರ್ನರ್ ಒಬ್ಬರ ಉತ್ತರ ‘ಹೌದು’.

‘ಈ ಮೊದಲು ಅದು ಗವರ್ನರ್ ಮತ್ತು ಸರಕಾರದ ನಡುವಣ ನಿರ್ಧಾರವಾಗಿತ್ತು. ಆದರೆ ಈಗ ನಿರ್ದೇಶಕ ಮಂಡಳಿಗೆ ಮಹತ್ವ ದೊರೆತಿದೆ. ನಿರ್ದೇಶಕ ಮಂಡಳಿ ಕೇಂದ್ರ ಸರಕಾರದ ನಿರ್ದೇಶನಗಳಂತೆ ನಡೆಯುತ್ತಿದೆ. ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಯು.ಆರ್‌ ರಾವ್ ಅವರಂತಹ ಗಣ್ಯರು ಸದಸ್ಯರಾಗಿದ್ದ ನಿರ್ದೇಶಕ ಮಂಡಳಿಗಳು ಕೇವಲ ಮಾರ್ಗದರ್ಶನ ಮಾಡುತ್ತಿದ್ದವು. ಈಗ ಆರ್‌ಬಿಐ ಆಡಳಿತ ವ್ಯವಸ್ಥೆ ಮೊದಲಿನಂತೆಯೇ ಇದ್ದರೂ ಬಾಂಧವ್ಯ ಮಾತ್ರ ಬದಲಾಗಿದೆ’ ಎಂದು ಅವರು ವ್ಯಾಖ್ಯಾನಿಸಿದರು.

About the author

ಕನ್ನಡ ಟುಡೆ

Leave a Comment