ರಾಜ್ಯ ಸುದ್ದಿ

ಆ್ಯಂಬಿಡೆಂಟ್‌ ವಂಚನೆ ಪ್ರಕರಣ: ಜನಾರ್ದನ ರೆಡ್ಡಿ ಸೇರಿದಂತೆ 8 ಮಂದಿ ವಿರುದ್ದ ಚಾರ್ಜ್ ಶೀಟ್

ಬೆಂಗಳೂರು: ಬಹುಕೋಟಿ ವಂಚನೆ ಆರೋಪದ ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ಸಿಸಿಬಿ  ಪೊಲೀಸ್ ತಂಡ 4800 ಪುಟಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೆಪಿಐಡಿ (ಹಣಕಾಸು ಸಂಸ್ಥೆಗಳಲ್ಲಿ ಹಣ ತೊಡಗಿಸಿದ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆ) ಅಡಿಯಲ್ಲಿ ಸಿಸಿಬಿ ದಾಖಲಿಸಿದ ಮೊದಲ ದೋಷಾರೋಪಣೆ ಪಟ್ಟಿ ಇದಾಗಿದೆ. ಪ್ರಕರಣ ಸಂಬಂಧ ದೇವರಜೀವನಹಳ್ಳಿ ಠಾಣೆ ಸೇರಿ ವಿವಿಧೆಡೆ 6 ಪ್ರಕರಣಗಳು ದಾಖಲಾಗಿದ್ದು ಇವೆಲ್ಲದರ ತನಿಖೆ ನಡೆಸಿದ್ದಾಗಿ ಹೇಳಿರುವ ಸಿಸಿಬಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಆರನೇ ಆರೋಪಿಯನ್ನಾಗಿಸಿದೆ. ಉಳಿದಂತೆ ಆ್ಯಂಬಿಡೆಂಟ್‌ ಕಂಪನಿ, ಫರೀದ್‌, ಅಫಾಕ್‌ ಅಹಮದ್‌, ಇರ್ಫಾನ್‌ ಮಿರ್ಜಾ, ವಿಜಯ್‌ ಟಾಟಾ, ಜನಾರ್ದನ ರೆಡ್ಡಿ ಅವರ ಆಪ್ತ  ಮೆಹಫೂಜ್‌ ಅಲಿಖಾನ್‌, ಬಳ್ಳಾರಿ ರಮೇಶ, ಇನಾಯತ್‌ವುಲ್ಲಾ ವಹಾಬ್‌, ಅಶ್ರಫ್‌ ಅಲಿ ಅವರುಗಳು ಆರೋಪಿಗಳಾಗಿದ್ದಾರೆ.
ಅಫಾಕ್‌ ಅಹಮದ್‌ಗೆಸೇರಿದ ಆಸ್ತಿ, ಜನಾರ್ದನ ರೆಡ್ಡಿಗೆ ಸೇರಿದ ರೇಸ್‌ಕೋರ್ಸ್‌ ರಸ್ತೆಯಲ್ಲಿನ 5 ಕೋಟಿ ರೂ. ಮೌಲ್ಯದ ಪಾರಿಜಾತ ಅಪಾರ್ಟ್‌ಮೆಂಟ್‌ ಸೇರಿ ಒಟ್ಟು 60 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕೆಪಿಐಡಿ ಕಾಯ್ದೆ ಪ್ರಕಾರ ಜಪ್ತಿ ಮಾಡಲು ವಿಶೇಷಾಧಿಕಾರಿ ಬೆಂಗಳೂರು ಉತ್ತರ ವಿಭಾಗ ಎಸಿ ನಾಗರಾಜು ಅವರಿಗೆ ವರದಿ ಸಲ್ಲಿಸಲಾಗಿದೆ. ಸರ್ಕಾರವೂ ಸಹ ಫೆ.7ರಂದು ರಾಜ್ಯಪತ್ರದಲ್ಲಿ ಪ್ರಕಟ ಮಾಡಿದೆ ಎಂದು ತನಿಖಾಧಿಕಾರಿಗಳು ದೋಷಾರೋಪಣೆ ಪಟ್ಟಿ ಮೂಲಕ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.  ಮುಂದಿನ ದಿನಗಳಲ್ಲಿ ಜಪ್ತಿ ಮಾಡುವ ಆಸ್ತಿಯಿಂದ ಹೂಡಿಕೆದಾರರಿಗೆ ಹಣ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆ್ಯಂಬಿಡೆಂಟ್‌ 10564 ಮಂದಿಯಿಂದ 120 ಕೋಟಿಯಷ್ಟು ಹಣ ಸಂಗ್ರಹಿಸಿದೆ. ಇದರಲ್ಲಿ ಕಂಪನಿ ವಿರುದ್ಧ ಸಿಸಿಬಿ ಕಚೇರಿಗೆ 4,800 ಹೂಡಿಕೆದಾರರು ಬಂದು ದೂರು ಕೊಟ್ಟು ಹೆಸರು ನೋಂದಾಯಿಸಿದ್ದಾರೆ. ಈ ಪ್ರಕಾರ 82.10 ಕೋಟಿ ರೂ. ಅನ್ನು ಹೂಡಿಕೆದಾರರಿಗೆ ಹಿಂತಿರುಗಿಸದೆ ಕಂಪನಿ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. .

About the author

ಕನ್ನಡ ಟುಡೆ

Leave a Comment