ಅ೦ತರಾಷ್ಟ್ರೀಯ

ಇಂಗ್ಲೆಂಡ್‌ನ 50 ಪೌಂಡ್‌ ಕರೆನ್ಸಿಗೆ ಭಾರತದ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌ ಚಿತ್ರ

ಲಂಡನ್‌: ಇಂಗ್ಲೆಂಡ್‌ನ 50 ಪೌಂಡ್‌ ಮುಖಬೆಲೆಯ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌  ಭಾವಚಿತ್ರ ಮುದ್ರಿಸುವಂತೆ ಅಲ್ಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನಾಮ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ 50 ಪೌಂಡ್‌ ಮುಖಬೆಲೆ ನೋಟಿನ ವಿನ್ಯಾಸ ಬದಲಿಸಿ ಹೊಸ ಕರೆನ್ಸಿ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಈ ನಿಟ್ಟಿನಲ್ಲಿ ನಾಮ ನಿರ್ದೇಶನ ಮಾಡುವಂತೆ ಜನತೆಗೆ ಕೇಳಿತ್ತು. ಅಚ್ಚರಿ ಎಂಬಂತೆ ಭಾರತದ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌ ಹೆಸರು ಕೇಳಿ ಬರುತ್ತಿದೆ.

ಜೆಸಿ ಬೋಸ್‌ ಹೆಸರು ಏಕೆ?
ಭಾರತದ ವಿಜ್ಞಾನಿ ಜಗದೀಶ್‌ ಚೆಂದ್ರ ಬೋಸ್‌ ಅವರ ಹೆಸರು ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿರುವುದೇಕೆ ಗೊತ್ತೆ? ವೈಫೈ ತಂತ್ರಜ್ಞಾನಕ್ಕೆ ಬೋಸ್‌ ನೀಡಿದ ಕೊಡುಗೆ! ಅಯ್ಯೋ, ವೈಫೈ ಆವಿಷ್ಕಾರವಾಗಿದ್ದು ಇತ್ತೀಚೆಗಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ರೋಡಿಯೋ ಅನ್ವೇಷಣೆ ಆಗದಿದ್ದರೆ ವೈಫೈ ತಂತ್ರಜ್ಞಾನದ ಅನ್ವೇಷಣೆಯೇ ಆಗುತ್ತಿರಲಿಲ್ಲ. ಆದರೆ ರೇಡಿಯೋ ಕಂಡು ಹಿಡಿದಿದ್ದು ಮಾರ್ಕೋನಿ ಅಲ್ಲವೇ? ಎಂಬ ಪ್ರಶ್ನೆ ಕೇಳಿ ಬರುವುದೂ ಸಹಜ. ಹೌದು, ರೇಡಿಯೋ ಕಂಡು ಹಿಡಿದಿದ್ದು ಗುಗ್ಲಿಮೊ ಮಾರ್ಕೊನಿ. ಆದರೆ ಜಗದೀಶ್‌ ಚಂದ್ರ ಬೋಸ್‌ ಅವರ ಸಹಾಯವಿಲ್ಲದೆ ರೇಡಿಯೋ ಕಂಡು ಹಿಡಿಯಲು ಸಾಧ್ಯವಿರಲಿಲ್ಲ. ರೇಡಿಯೋ ಅನ್ವೇಷಣೆಗೆ ಬೋಸ್‌ ಅಭೂತಪೂರ್ವ ಕೊಡುಗೆ ಬಗ್ಗೆ ಮಾರ್ಕೊನಿ ತನ್ನ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಇಲೆಕ್ಟ್ರೋಮ್ಯಾಗ್ನೆಟಿಕ್‌ ವೇವ್‌ ಅಂದರೆ ವಿದ್ಯುತ್ಕಾಂತೀಯ ತರಂಗ ಸಂವಹನ. ಇದನ್ನು ಮೊದಲು ಕಂಡು ಹಿಡಿದಿದ್ದು ಜೆಸಿ ಬೋಸ್‌.

ಆದರೆ ಟೆಲಿಗ್ರಫಿ ವಾಣಿಜ್ಯೀಕರಣದ ಬಗ್ಗೆ ಬೋಸ್‌ ಆಸಕ್ತರಾಗಿರಲಿಲ್ಲ. ಬೇರೆಯವರಿಗೆ ಬಳಕೆ ಮಾಡುವಂತೆ ಉತ್ತೇಜನ ನೀಡುವಲ್ಲು ನಿರುತ್ಸಾಹರಾಗಿದ್ದರು. 1896ರಲ್ಲಿ ಇಟಲಿ ವಿಜ್ಞಾನಿ ಮಾರ್ಕೊನಿ ಅವರನ್ನು ಬೋಸ್‌ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಮಾರ್ಕೊನಿ ತಂತಿರಹಿತ ಸಂವಹನ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಬೋಸ್‌ ಅವರ ಜ್ಞಾನದಿಂದ ತನ್ನ ಸಂಶೋಧನೆಗೆ ಹೇಗೆ ಸಹಕಾರಿಯಾಯಿತು ಎಂಬುದನ್ನು ಮಾರ್ಕೊನಿ ಬರೆದುಕೊಂಡಿದ್ದಾರೆ. ಹಾಗೆ ನೋಡಿದ್ದರೆ ವಿದ್ಯುತ್ಕಾಂತೀಯ ತರಂಗವನ್ನು ಪಡೆಯುವ ಘನ ಸ್ಥಿತಿಯ ಡಯೋಡ್‌ನ ಪೇಟೆಂಟ್‌ ಬೋಸ್‌ ಅವರದ್ದಾಗಬೇಕಿತ್ತು. ಸಾಮಾನ್ಯ ಮೈಕ್ರೊವೇವ್‌ ಕಾಂಪೊನೆಂಟ್‌ಗಳನ್ನು ಪತ್ತೆ ಮಾಡಿದ್ದು ಬೋಸ್‌.

ಸಸ್ಯಶಾಸ್ತ್ರಕ್ಕೆ ಬೋಸ್‌ ಕೊಡುಗೆ ಅಪಾರ. ಬೋಸ್‌ ಕಂಡುಹಿಡಿದ ಕ್ರೆಸ್ಕೋಗ್ರಾಫ್‌ ಸಸ್ಯ ವಿಜ್ಞಾನಿಗಳಿಗೆ ಸಸ್ಯಗಳ ಬಗ್ಗೆ ಸಂಶೋಧನೆ ಪರಿಣಾಮಕಾರಿ ಸಾಧನವಾಗಿದೆ. ವಿಜ್ಞಾನ ಲೋಕದಲ್ಲಿ ಅಪ್ರತಿಮ ಕೊಡುಗೆ ನೀಡಿರುವ ಬೋಸ್‌ ಭಾವಚಿತ್ರ ಪೌಂಡ್‌ನಲ್ಲಿ ಕಂಗೊಳಿಸಲಿ. ಬೋಸ್‌ ಬಗ್ಗೆ ಎಲ್ಲರೂ ಅರಿಯುವಂತಾಗಲಿ ಎಂಬುದು ನಮ್ಮ ಆಶಯ.

About the author

ಕನ್ನಡ ಟುಡೆ

Leave a Comment