ರಾಷ್ಟ್ರ ಸುದ್ದಿ

ಇಂಡೋನೇಷ್ಯಾ ಸುನಾಮಿ ಪ್ರಭಾವ: ಗೋವಾ ಸಮುದ್ರ ಮಟ್ಟದಲ್ಲಿ ಏರಿಕೆ

ಪಣಜಿ: ಇಂಡೋನೇಷ್ಯಾದಲ್ಲಿನ ಸುನಾಮಿ ಪ್ರಭಾವ ಗೋವಾದ ಬೀಚ್‌ಗಳ ಮೇಲೆ ಉಂಟಾಗಿದೆ. ಕಳೆದೆರಡು ದಿನಗಳಿಂದ ಗೋವಾದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿದ್ದರಿಂದ ಬೀಚ್‌ಗಳಲ್ಲಿ ನಿರ್ಮಿಸಲಾಗಿದ್ದ ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಒಳಗೆ ನೀರು ನುಗ್ಗಿ ಹೆಚ್ಚಿನ ಹಾನಿ ಸಂಭವಿಸಿದೆ. ಕ್ರಿಸ್‌ಮಸ್‌ ಸಂಭ್ರಮಾಚರಣೆಗಾಗಿ ಗೋವಾಕ್ಕೆ ಆಗಮಿಸಿದ್ದ ಪ್ರವಾಸಿಗರು ಬೀಚ್‌ಗೆ ತೆರಳಿ ಸಂಭ್ರಮಿಸಲು ಸಾಧ್ಯವಾಗಿಲ್ಲ. ದಕ್ಷಿಣ ಗೋವಾದ ಕೋಲ್ವಾ, ಬಾಣಾವಲಿ, ಕಾಸಾವಲಿ, ಮಜೋರ್ದಾ, ಕೇಳಶಿ, ಉತ್ತರ ಗೋವಾದ ಕಾಂದೋಳಿಂ ಸೇರಿದಂತೆ ಹಲವು ಬೀಚ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹೆಚ್ಚಾಗಿದ್ದರಿಂದ ಬೀಚ್‌ಗೆ ತೆರಳಿದ್ದ ಪ್ರವಾಸಿಗರು ಆತಂಕದಿಂದ ವಾಪಸ್‌ ಬಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆಯ ಹಿರಿಯ ಶಾಸ್ತ್ರಜ್ಞ ಬಬನ್‌ ಇಂಗೊಲೆ, ಇದು ಇಂಡೋನೇಷ್ಯಾದ ಸುನಾಮಿ ಪ್ರಭಾವವಾಗಿರಲು ಸಾಧ್ಯವಿಲ್ಲ. ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದ ಸಂಭವಿಸಿರಬಹುದು. ಇಷ್ಟೇ ಅಲ್ಲದೇ ಹುಣ್ಣಿಮೆ ಸಮಯದಲ್ಲಿ ಸಮುದ್ರ ಏರಿಳಿತ ಸಹಜ ಎಂದು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆಯೂ ಕೂಡ ಇದೇ ರೀತಿ ಸಮುದ್ರ ಉಕ್ಕಿದ್ದರಿಂದ ಬೀಚ್‌ಗಳಲ್ಲಿದ್ದ ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಸಂಪೂರ್ಣ ಕೊಚ್ಚಿ ಹೋಗಿ ಅಪಾರ ಹಾನಿ ಸಂಭವಿಸಿತ್ತು. ಇದು ಮರುಕಳಿಸಿರುವುದರಿಂದ ಗೋವಾ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಿದೆ.

ಹೊಸ ವರ್ಷಾಚರಣೆಗೆ ಶಾಕ್‌
ಪಣಜಿ: ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಸಂಭ್ರಮಾಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಕುರಿತಂತೆ ಪ್ರವಾಸೋದ್ಯಮ ಇಲಾಖೆಯು ಪೊಲೀಸ್‌ ಇಲಾಖೆಗೆ ಸೂಚನೆಯನ್ನೂ ನೀಡಿದೆ. ಹೊಸ ವರ್ಷ ಸಂಭ್ರಮಾಚರಣೆಗಾಗಿ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಇವರಲ್ಲಿ ದೇಸಿ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕುರಿತು ರಾಜ್ಯ ಪ್ರವಾಸೋದ್ಯಮ ಸಚಿವ ಬಾಬು ಆಜಗಾಂವಕರ್‌ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಯಾವುದೇ ಕಾರಣದಿಂದಲೂ ಸಹಿಸಲು ಸಾಧ್ಯವಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಸೂಚನೆ ನೀಡಲಾಗಿದೆ ಎಂದರು.

 

About the author

ಕನ್ನಡ ಟುಡೆ

Leave a Comment