ಸಿನಿ ಸಮಾಚಾರ

ಇಂದು ಅಪ್ಪಾಜಿಯ ಒಂದು ಕೈ ನಮ್ಮ ತಲೆಯ ಮೇಲೆ ಇಲ್ಲದಿದ್ದಕ್ಕೆ ಎಲ್ಲರೂ ಮಾತನಾಡುತ್ತಿದ್ದಾರೆ: ನಟ ದರ್ಶನ್​ ಬೇಸರ

ಬೆಂಗಳೂರು/ಮಂಡ್ಯ: ನಟಿ ಸುಮಲತಾ ಅಂಬರೀಷ್​ ಅವರಿಗೆ ಬಹಿರಂಗ ಬೆಂಬಲ ನೀಡಿದ್ದಾಗಿನಿಂದ ಮೈತ್ರಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ನಟರಾದ ದರ್ಶನ್​ ಮತ್ತು ಯಶ್​ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎಸುರಿಸುತ್ತಿದ್ದು, ಇದಕ್ಕೆ ನಟ ದರ್ಶನ್​ ಪ್ರತ್ಯುತ್ತರ ನೀಡಿದ್ದಾರೆ. ಮಂಡ್ಯ ಲೋಕಸಭಾ ಸಮರದಲ್ಲಿನ ಬೆಳವಣಿಗೆಗಳ ಬಗ್ಗೆ ಗರಂ ಆಗಿರುವ ದರ್ಶನ್​ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್​ ಅನ್ನುವುದು ಮನೆಯಲ್ಲಿ ಇಟ್ಟ ಹೆಸರು. ಚಾಲೆಂಜಿಂಗ್​ ಸ್ಟಾರ್​ ಅನ್ನುವುದು ಹೀರೋಗಳಿಗೆ ಕೊಟ್ಟಿರುವ ಬಿರುದು. ಡಿ ಬಾಸ್​ ಎನ್ನುವ ಹೆಸರು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರುವ ಹೆಸರು ಎಂದು ಹೇಳುವ ಮೂಲಕ ಯಾರೋ ಡಿ ಬಾಸ್​ ಅಂತೆ ಎಂದು ವ್ಯಂಗ್ಯವಾಡಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಮನೆಗೆ ಕಲ್ಲು ತೂರಿದ್ದ ಪ್ರಕರಣದ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ ಎಂದ ದರ್ಶನ್​, ಇಲ್ಲಿ ಮಾತನಾಡುವುದನ್ನು ಅಲ್ಲಿಗೆ ಹೇಳುವುದು, ಅಲ್ಲಿಯದನ್ನು ಇಲ್ಲಿಗೆ ಹೇಳುವುದನ್ನು ಏಕೆ ಮಾಡುತ್ತೀರ? ಬಿಟ್ಟುಬಿಡಿ ಅವರು ಏನಾದರೂ ಮಾತನಾಡಿಕೊಳ್ಳಲಿ. ನಾನು ಮಂಡ್ಯ ಸಮಾವೇಶದಲ್ಲೇ ಕೋಪ ಮಾಡಿಕೊಳ್ಳುವುದಿಲ್ಲ. ಬೇಜಾರು ಮಾಡಿಕೊಳ್ಳುವುದಿಲ್ಲ ಹಾಗೂ ನೊಂದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ ಈಗಲೂ ಅದನ್ನೇ ಹೇಳುತ್ತೇನೆ ಎಂದು ತಿಳಿಸಿದರು. ಸುಮಲತಾ ಹೆಸರಿನಲ್ಲಿ‌ ಮೂವರು ಮಹಿಳೆಯರು ಚುನಾವಣೆಗೆ ನಿಂತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್​, ನಾನು ಚುನಾವಣೆಗೆ ನಿಂತಿಲ್ಲ. ಕೇವಲ ಪ್ರಚಾರ ಮಾತ್ರ ಮಾಡುತ್ತಿದ್ದೇನೆ. ಆದರೆ, ಇಷ್ಟೊಂದು ಟೀಕೆಗಳು ಯಾಕೆ ಬರುತ್ತಿದೆ ನನಗೆ ಗೊತ್ತಿಲ್ಲ. ಈ ಹಿಂದೆ ಅಪ್ಪಾಜಿ(ಅಂಬರೀಷ್​) ಅವರು ನಿಂತಾಗಲೂ ಪ್ರಚಾರ ಮಾಡಿದ್ದೇನೆ. ಆಗ ಯಾವುದೇ ಮಾತುಗಳು ಬರುತ್ತಿಲ್ಲ. ಇಂದು ಅಪ್ಪಾಜಿಯ ಒಂದು ಕೈ ನಮ್ಮ ತಲೆಯ ಮೇಲೆ ಇಲ್ಲದಿದ್ದಕ್ಕೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದರಿಂದ ನಮಗೇನು ತೊಂದರೆಯಿಲ್ಲ ಎಂದು ತಿಳಿಸಿದರು. ಇದೇ ವೇಳೆ 2ನೇ ತಾರೀಖಿನಿಂದ ಸುಮಲತಾ ಪರ ಪ್ರಚಾರಕ್ಕೆ ಆಗಮಿಸುವುದಾಗಿ ಮಾಹಿತಿ ನೀಡಿದರು.

About the author

ಕನ್ನಡ ಟುಡೆ

Leave a Comment