ರಾಜ್ಯ ಸುದ್ದಿ

ಇಂದು ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು: ದಶಕಗಳ ಕಾಲ ಬದ್ಧ ರಾಜಕೀಯ ವೈರಿಗಳಂತೆ ಆರೋಪ-ಪ್ರತ್ಯಾರೋಪ ನಡೆಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹನ್ನೆರಡು ವರ್ಷಗಳ ಬಳಿಕ ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಬೆಳಗ್ಗೆ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದು, 2005ರ ಬಳಿಕ ಇದೇ ಮೊದಲ ಬಾರಿಗೆ ಉಭಯ ನಾಯಕರು ಚುನಾವಣಾ ರಣತಂತ್ರದ ಭಾಗವಾಗಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಇವರಿಬ್ಬರು ಮಾತನಾಡಲಿದ್ದಾರೆ. ಮೂಲತಃ ಜನತಾ ಪರಿವಾರದವರೇ ಆದ ಸಿದ್ದರಾಮಯ್ಯ 2005ರ ವರೆಗೂ ದೇವೇಗೌಡರ ಕಟ್ಟಾ ಬೆಂಬಲಿಗರಾಗಿದ್ದರು. ಆದರೆ ಅಹಿಂದ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕಾಗಿ 2006ರಲ್ಲಿ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಲಾಗಿತ್ತು. ಆ ಬಳಿಕ ಕಾಂಗ್ರೆಸ್‌ ಸೇರಿದ್ದ ಸಿದ್ದರಾಮಯ್ಯ ದೇವೇಗೌಡರ ಕಡು ವಿರೋಧಿಯಾಗಿ ಬದಲಾಗಿದ್ದರು.

ಜೆಡಿಎಸ್‌ ಅನ್ನು ‘ಅಪ್ಪ-ಮಕ್ಕಳ ಪಕ್ಷ’ ಎಂದು ಲೇವಡಿ ಮಾಡುತ್ತಿದ್ದ ಅವರು, ಜೆಡಿಎಸ್‌ ಬಿಜೆಪಿಯ ಬಿ ಟೀಮ್‌ ಎಂಬ ಘೋಷಣೆಯ ಸೃಷ್ಟಿಕರ್ತರೂ ಹೌದು. ಜೆಡಿಎಸ್‌ಗೆ ಮತ ಹಾಕುವುದೆಂದರೆ ಅದು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದಂತೆ ಎಂಬ ಹೇಳಿಕೆ ನೀಡಿ ಗೌಡರ ಕೆಂಗಣ್ಣಿಗೆ ಗುರಿಯಾಗಿದ್ದ ಸಿದ್ದರಾಮಯ್ಯ ಈಗ ದೇವೇಗೌಡರ ಜತೆಗೂಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಸಿದ್ಧರಾಗಿದ್ದಾರೆ. ಉಭಯ ನಾಯಕರ ಗೋಷ್ಠಿ ಈಗ ಕುತೂಹಲ ಮೂಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment