ರಾಜಕೀಯ

ಇರೋದು 28 ಕ್ಷೇತ್ರ, 120ರಲ್ಲಿ ಗೆಲ್ತೀವಿ: ಬಿ.ಎಸ್.ಯಡಿಯೂರಪ್ಪ

ತುಮಕೂರು: ಮಾತಿನ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಯಡವಟ್ಟಿನ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು, ರಾಜ್ಯದಲ್ಲಿ ಇರುವುದೇ 28 ಲೋಕಸಭಾ ಕ್ಷೇತ್ರಗಳು. ಆದರೆ, ಮಾತಿನ ಭರದಲ್ಲಿ ಬಿಎಸ್‌ವೈ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 120ಕ್ಕೂ ಅಧಿಕ ಕ್ಷೇತ್ರವನ್ನು ಗೆಲ್ಲಬೇಕು ಎಂದು ಯಡವಟ್ಟು ಮಾಡಿಕೊಂಡಿದ್ದಾರೆ.

‘1 ಸಾವಿರಕ್ಕೂ ಹೆಚ್ಚು ಮೋಟರ್ ಬೈಕ್‌ನಲ್ಲಿ ಮೆರವಣಿಗೆ ಮಾಡುತ್ತಿದ್ದೇವೆ. ಇದರ ಉದ್ದೇಶ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 120ಕ್ಕೂ ಹೆಚ್ಚು ಕ್ಷೇತ್ರವನ್ನು ಗೆಲ್ಲಬೇಕು. ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ದೇಶದಲ್ಲಿ 300ಕ್ಕೂ ಹೆಚ್ಚು ಸೀಟು ಗೆದ್ದು, ಮತ್ತೆ ಮೋದಿ ಅವರನ್ನು ಈ ದೇಶದ ಪ್ರಧಾನಿ ಮಾಡಬೇಕು ಎಂಬ ಕಾರಣಕ್ಕೆ ತುಮಕೂರಿನಲ್ಲಿ ಬೈಕ್ ರ‍್ಯಾಲಿಯನ್ನು ಉದ್ಘಾಟನೆ ಮಾಡುತ್ತಿದ್ದೇನೆ’ ಎಂದವರು ಹೇಳಿದ್ದಾರೆ. ಬಳಿಕ ಪತ್ರಕರ್ತರೊಬ್ಬರು ರಾಜ್ಯದಲ್ಲಿ ಎಷ್ಟು ಸೀಟು ಗೆಲ್ಲಬೇಕು ಎಂದು ಸಂಕಲ್ಪ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕನಿಷ್ಠ 22 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಇನ್ನೊಂದು ವಾರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಭೇಟಿ ಮಾಡಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ ಎಂದರು. ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಈ ಬಗ್ಗೆ ಚರ್ಚೆ ಮಾಡಿಲ್ಲ. ಮುಂದೆ ನೋಡೋಣ ಎಂದು ಹೇಳಿದರು

About the author

ಕನ್ನಡ ಟುಡೆ

Leave a Comment