ದೇಶ ವಿದೇಶ

ಇವಿಎಂ ಹ್ಯಾಕ್‌ ಮಾಡಲು ಸಾಧ್ಯ ಎಂದ ತಜ್ಞ, ವಾದ ತಳ್ಳಿಹಾಕಿದ ಚುನಾವಣಾ ಆಯೋಗ

ಲಂಡನ್‌/ಹೊಸದಿಲ್ಲಿ: ಎಲೆಕ್ಟ್ರಾನಿಕ್‌ ಮತಯಂತ್ರ(ಇವಿಎಂ) ಹ್ಯಾಕ್‌ ಮಾಡಲು ಸಾಧ್ಯ. 2014ರ ಲೋಕಸಭೆ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಆಗಿದೆ ಎಂದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸೈಬರ್‌ ತಜ್ಞ ಸಯೀದ್‌ ಶುಜಾ ಆರೋಪಿಸಿದ್ದಾರೆ. ಆದರೆ ಇವರ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ.

ಮುಖಕ್ಕೆ ಮಾಸ್ಕ್‌ ಧರಿಸಿ ಸ್ಕೈಪ್‌ ಮೂಲಕ ಲಂಡನ್‌ನಿಂದ ಸುದ್ದಿಗೋಷ್ಠಿ ನಡೆಸಿದ ಶುಜಾ, ನಮ್ಮ ತಂಡದ ಕೆಲವರನ್ನು ಕೊಲೆ ಮಾಡಿದ ನಂತರ ಭಯದಿಂದ 2014ರಲ್ಲಿ ನಾನು ಭಾರತ ತೊರೆದೆ ಎಂದು ಹೇಳಿದ್ದಾರೆ. ”ಇವಿಎಂಗಳನ್ನು ಹ್ಯಾಕ್‌ ಮಾಡಲು ಬಿಜೆಪಿಯ ಐಟಿ ಸೆಲ್‌ಗೆ ಕಡಿಮೆ ಫ್ರಿಕ್ವೆನ್ಸಿಯ ಸಿಗ್ನಲ್‌ಗಳನ್ನು ಪೂರೈಸುವ ಮೂಲಕ ರಿಲಯನ್ಸ್‌ ಜಿಯೊ ನೆರವಾಗಿತ್ತು. ಡೇಟಾ ಕಳುಹಿಸಲು ರಿಲಯನ್ಸ್‌ ಜಿಯೊ ಬಳಿ ನೆಟ್‌ವರ್ಕ್‌ ಇದೆ. ಬಿಜೆಪಿ ಇದರ ಲಾಭ ಪಡೆಯುತ್ತಿದೆ,” ಎಂದು ಆರೋಪಿಸಿದ್ದಾರೆ.

ಆದರೆ ಗಮನಿಸಬೇಕಾದ ವಿಷಯವೆಂದರೆ, 2014ರಲ್ಲಿ ರಿಲಯನ್ಸ್‌ ಜಿಯೊ ತನ್ನ ಕಾರ್ಯ ಚಟುವಟಿಕೆಯನ್ನೇ ಆರಂಭಿಸಿರಲಿಲ್ಲ. ಅದು ಲಾಂಚ್‌ ಆಗಿದ್ದೇ 2016ರ ಸೆಪ್ಟೆಂಬರ್‌ನಲ್ಲಿ. ಬಿಜೆಪಿ ಜತೆಗೆ ಕಾಂಗ್ರೆಸ್‌, ಎಎಸ್‌ಪಿ, ಬಿಎಸ್‌ಪಿ ಮತ್ತು ಆಪ್‌ ಸಹ ಇವಿಎಂ ದುರ್ಬಳಕೆಯಲ್ಲಿ ತೊಡಗಿದೆ ಎಂದು ಶುಜಾ ಆರೋಪಿಸಿದ್ದಾರೆ.ಆದರೆ ಈ ಆರೋಪಕ್ಕೆ ಶುಜಾ ಅವರು ಯಾವುದೇ ಸಾಕ್ಷಿ, ದಾಖಲೆ ಅಥವಾ ಪ್ರಾತ್ಯಕ್ಷಿಕೆ ಒದಗಿಸಲಿಲ್ಲ. ವಿಎಂ ಅನ್ನು ಯಾವುದೇ ರೀತಿಯಲ್ಲಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಆರೋಪವನ್ನು ತಳ್ಳಿಹಾಕಿದೆ.

About the author

ಕನ್ನಡ ಟುಡೆ

Leave a Comment