ತಂತ್ರಜ್ಞಾನ

ಇಸ್ರೋದಿಂದ ಸೇನಾ ಉಪಗ್ರಹ ಮೈಕ್ರೋಸ್ಯಾಟ್‌-ಆರ್ ಯಶಸ್ವಿ ಉಡಾವಣೆ

ಚೆನ್ನೈ: 2019ರ ಮೊದಲ ಯಶಸ್ವಿ ಉಡಾವಣೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ ) ಮಹತ್ವದ ಹೆಜ್ಜೆಯಿಟ್ಟಿದೆ. ಪೋಲಾರ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) 740 ಕೆಜಿ ತೂಕದ ಸೇನಾ ಸಹಾಯಕ ಉಪಗ್ರಹ ಮೈಕ್ರೋಸ್ಯಾಟ್‌-ಆರ್‌ ಅನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಈ ಉಪಗ್ರಹವು ಸೇನೆಯ ಯಾವ ಕಾರ್ಯಕ್ಕೆ ಸಹಾಯ ಮಾಡುತ್ತದೆ ಎಂಬ ವಿವರಗಳನ್ನು ಇಸ್ರೋ ನೀಡಿಲ್ಲ.

ಗುರುವಾರ ರಾತ್ರಿ 11.37ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-44 ನಭಕ್ಕೆ ಜಿಗಿಯಿತು. ಮೈಕ್ರೋಸ್ಯಾಟ್‌-ಆರ್‌ ಜತೆಗೆ ವಿದ್ಯಾರ್ಥಿಗಳು ತಯಾರಿಸಿದ ಕಲಾಂಸ್ಯಾಟ್‌ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿತು. ಇದು ಪಿಎಸ್‌ಎಲ್‌ವಿಯ 46ನೇ ಉಡಾವಣೆಯಾಗಿದೆ. 13 ನಿಮಿಷಗಳ ಕಾರ್ಯಾಚರಣೆಯಲ್ಲಿ 277.2 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಮೈಕ್ರೋಸ್ಯಾಟ್‌-ಆರ್‌ಅನ್ನು ಸೇರಿಸಲಾಯಿತು.

ಮೈಕ್ರೋಸ್ಯಾಟ್‌-ಆರ್‌ ಉಪಗ್ರಹವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದೆ. ಯಶಸ್ವಿ ಉಡಾವಣೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ತ್ಯಾಜ್ಯವಾಗುವ ರಾಕೆಟ್ ನ 4ನೇ ಹಂತವನ್ನು ಸಂಶೋಧನೆ ಬಳಸಿಕೊಂಡ ಮೊದಲ ರಾಷ್ಟ್ರ ಭಾರತ. 

 

ಬೆಂಗಳೂರು: ರಾಕೆಟ್‌ ಉಡಾವಣೆಗೊಂಡ ನಂತರ ತ್ಯಾಜ್ಯವಾಗಿ ಬೀಳುವ ನಾಲ್ಕನೇ ಹಂತ (ಪಿಎಸ್‌4)ದ ಭಾಗವನ್ನು ಸಂಶೋಧನೆಗೆ ಉಪಯೋಗಿಸಿದ ಮೊದಲ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ.

ಗುರುವಾರ ರಾತ್ರಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದ ಪಿಎಸ್‌ಎಲ್‌ಪಿ ಸಿ-44ನ ಕೊನೆಯ ಹಂತವು ವಿದ್ಯಾರ್ಥಿಗಳು ತಯಾರಿಸಿದ ಕಲಾಂಸ್ಯಾಟ್‌-ವಿ2 ಉಪಗ್ರಹವನ್ನು ಕಕ್ಷೆಗೆ ಸೇರಿಸಿತು. 1 ಗಂಟೆ ಮತ್ತು 40 ನಿಮಿಷಗಳ ಅವಧಿಯಲ್ಲಿ ಕಲಾಂಸ್ಯಾಟ್‌-ವಿ2 ಉಪಗ್ರಹವನ್ನು ಗುರಿ ತಲುಪಿಸಿತು.

ರಾಕೆಟ್‌ನ ಕೊನೆಯ ಹಂತ (ಪಿಎಸ್‌4)ದ ಭಾಗವನ್ನು 2 ಸಲ ಚಾಲೂ ಮಾಡುವ ಮೂಲಕ 453 ಕಿ.ಮೀ. ದೂರದ ಕಕ್ಷೆಗೆ ಕಲಾಂಸ್ಯಾಟ್‌-ವಿ2ವನ್ನು ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ತ್ಯಾಜ್ಯವಾಗಿ ನಷ್ಟವಾಗುವ ರಾಕೆಟ್‌ನ 4ನೇ ಹಂತದ ಭಾಗವನ್ನು ಸಂಶೋಧನೆಗೆ ಉಪಯೋಗಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನರೇಂದ್ರ ಮೋದಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೂಕ್ಷ್ಮಗ್ರಾಹಿ ಪ್ರಯೋಗಗಳನ್ನು ನಡೆಸಲು ರಾಕೆಟ್‌ನ 4ನೇ ಹಂತವನ್ನು ಬಳಕೆ ಮಾಡುತ್ತಿರುವ ಮೊದಲ ರಾಷ್ಟ್ರ ಭಾರತ ಎಂದು ಕೊಂಡಾಡಿದ್ದಾರೆ.

ಪಿಟಿಐ ವರದಿ ಪ್ರಕಾರ ಕಲಾಂಸ್ಯಾಟ್‌ ಉಪಗ್ರಹವನ್ನು 12 ಲಕ್ಷ ರೂ.ಗಳ ಬಜೆಟ್‌ನಲ್ಲಿ ತಯಾರಿಸಲಾಗಿದೆ. ಇದೊಂದು ಪ್ರಯೋಗಾತ್ಮಕ ಉಪಗ್ರಹವಾಗಿದ್ದು, ಈ ಮೊದಲು ರಾಕೆಟ್‌ನ ನಾಲ್ಕನೆ ಹಂತದ ಬಳಕೆಯ ಪ್ರಯೋಗಕ್ಕೆ ವಿದ್ಯಾರ್ಥಿಗಳು ತಯಾರಿಸಿಗ ಉಪಗ್ರಹ ಕಳಿಸುವಂತೆ ಇಸ್ರೋ ಅಧ್ಯಕ್ಷ ಕೆ ಶಿವನ್‌ ಆಹ್ವಾನಿಸಿದ್ದರು.

About the author

ಕನ್ನಡ ಟುಡೆ

Leave a Comment