ರಾಜಕೀಯ

ಈಗಲ್‌ ಟನ್-ವಂಡರ್ ಲಾ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು: ಮಧ್ಯಾಹ್ನ ಮಹತ್ವದ ಸಭೆ

ಬೆಂಗಳೂರು: ಶುಕ್ರವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾಗಿರುವುದು ದೋಸ್ತಿ ಸರಕಾರದಲ್ಲಿ ನಡುಕ ಮೂಡಿಸಿದ್ದು, ಇನ್ನಷ್ಟು ಶಾಸಕರು ಕೈ ಬಿಡಬಹುದು ಎಂಬ ಭೀತಿಯಿಂದ ತಮ್ಮ ಎಂಎಲ್‌ಎಗಳನ್ನು ರಾತ್ರೋರಾತ್ರಿ ಬೆಂಗಳೂರಿನ ಹೊರವಲಯದ ಈಗಲ್‌ ಟನ್ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ.

ಆದರೆ, ಈಗಲ್‌ ಟನ್ ರೆಸಾರ್ಟ್‌ನಲ್ಲಿ ರೂಮ್‌ಗಳ ಕೊರತೆ ಇರುವ ಕಾರಣ ಕೆಲವು ಶಾಸಕರನ್ನು ವಂಡರ್ ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಎರಡು ರೆಸಾರ್ಟ್‌ಗಳಲ್ಲಿ ಒಟ್ಟು 64 ಶಾಸಕರ ವಾಸ್ತವ್ಯ ಹೂಡಿದ್ದಾರೆ. ಏತನ್ಮಧ್ಯೆ, ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ ಮುಕ್ತಾಯವಾಗಿದ್ದು, ಪಕ್ಷದ ಎಲ್ಲ ಶಾಸಕರು ದಿಲ್ಲಿಯಿಂದ ವಾಪಸ್ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಸಂಸದ ಡಿ ಕೆ ಸುರೇಶ್ ಅವರು ಈಗಲ್‌ ಟನ್ ರೆಸಾರ್ಟ್‌ನ ನೇತೃತ್ವ ವಹಿಸಿದ್ದರೆ, ತಾಲೂಕು ಪಂಚಾಯತಿ ಅಧ್ಯಕ್ಷ ಗಾಣಕಲ್ ನಟರಾಜ್ ವಹಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ಪರಮೇಶ್ವರ್ ನಾಯಕ್, ಎಚ್.ಕೆ.ಪಾಟೀಲ್, ಡಾ.ರಂಗನಾಥ್, ನಾರಾಯಣಸ್ವಾಮಿ, ಮುನಿರತ್ನ ಸೇರಿದಂತೆ 9 ಶಾಸಕರು ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ನಿನ್ನೆ ರಾತ್ರಿ ಈಗಲ್‌ ಟನ್ ರೆಸಾರ್ಟ್‌ನಲ್ಲಿ ಊಟ ಮುಗಿಸಿದ ಬಳಿಕ ಈ ಒಂಬತ್ತು ಶಾಸಕರು ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಲ್‌ ಟನ್‌ನಲ್ಲಿ ರೂಮ್‌ಗಳು ಖಾಲಿಯಾದ ಬಳಿಕ ಇವರು ಸಹ ಅಲ್ಲಿಗೆ ಧಾವಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಫ್ತಿ ಪೊಲೀಸರ ನಿಯೋಜನೆ : ಕಾಂಗ್ರೆಸ್‌ ಶಾಸಕರ ವಾಸ್ತವ್ಯ ಹಿನ್ನೆಲೆಯಲ್ಲಿ ವಂಡರ್ ಲಾ ರೆಸಾರ್ಟ್‌ ಸುತ್ತ ಮಫ್ತಿ ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸರು ಮಂಡರ್ ಲಾ ರೆಸಾರ್ಟ್‌ಗೆ ಭದ್ರತೆ ನೀಡಿದ್ದಾರೆ. ರೆಸಾರ್ಟ್ ಪ್ರವೇಶಿಸುವ ಎಲ್ಲ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.

ವಾಕಿಂಗ್‌ನಲ್ಲಿ ನಿರತರಾದ ಲಕ್ಷ್ಮೀ ಹೆಬ್ಬಾಳ್ಕರ್ : ವಂಡರ್ ಲಾ ಆವರಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಂಎಲ್‌ಸಿ ವರೆನೊಷಾ ಅವರೊಂದಿಗೆ ವಾಕಿಂಗ್‌ನಲ್ಲಿ ನಿರತರಾಗಿದ್ದಾರೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ  ಶನಿವಾರ ಮಧ್ಯಾಹ್ನ ಎಲ್ಲರೂ ಊಟಕ್ಕೆ ಸೇರುವಂತೆ ನಾಯಕರು ಸೂಚನೆ ನೀಡಿದ್ದು, 3 ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈಗಲ್ ಟನ್ ರೆಸಾರ್ಟ್‌ನಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ವರಿಷ್ಠರು ಸೂಚಿಸಿದ್ದಾರೆ.

About the author

ಕನ್ನಡ ಟುಡೆ

Leave a Comment