ರಾಜ್ಯ ಸುದ್ದಿ

ಈ ಬಾರಿ ಒಂದೇ ಸುತ್ತಿನ ಪೋಲಿಯೋ ಲಸಿಕೆ ಕಾರ್ಯಕ್ರಮ: ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ಮಾರ್ಚ್ 10ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಾರಿ ಒಂದೇ ಸುತ್ತಿನಲ್ಲಿ ಪೋಲಿಯೋ ಹನಿ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಯುಕ್ತ ‘ನಿಯರ್ ಬೈ ವ್ಯಾಕ್ಸಿನೇಷನ್ ಸೆಂಟರ್’ ಹೆಸರಿನ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದ್ದಾರೆ. ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತಕ್ಕೆ 2014ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಪ್ರಕರಣ ದೇಶದ ಕೊನೆಯ ಪ್ರಕರಣವಾಗಿದೆ. ಇತ್ತೀಚೆಗೆ ಅಫ್ಫಾನಿಸ್ತಾನದಲ್ಲಿ 2 ಹಾಗೂ ಪಾಕಿಸ್ತಾನದಲ್ಲಿ 4 ಪೋಲಿಯೋ ಪ್ರಕರಣಗಳು  ಕಂಡು ಬಂದಿರುವ ಹಿನ್ನೆಲಯಲ್ಲಿ ಭಾರತಕ್ಕೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಾರ್ಚ್ 10ರಂದು ನಡೆಯಲಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಎಂದಿನಂತೆ ಪ್ರತಿ ಶಿಶುವಿಗೆ 5 ವರಸೆ ಒಪಿವಿ (ಓರಲ್ ಪೋಲಿಯೋ ವ್ಯಾಕ್ಸೀನ್) ಮತ್ತು 2 ವರಸೆ ಐಪಿವಿ(ಇನ್‍ಜಕ್ಟಬಲ್ ಪೋಲಿಯೋ ವ್ಯಾಕ್ಸೀನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ಉದ್ದೇಶವಿದೆ ಎಂದರು. ಹಳ್ಳಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಬಟ್ಟೆ, ಕಾಮಗಾರಿ ವಲಸೆ ಪ್ರದೇಶಗಳು, ರೈಲ್ವೇ ಸ್ಟೇಷನ್, ಮೆಟ್ರೋ ಏರ್‍ಪೋರ್ಟ್ ಆಸ್ಪತ್ರೆಗಳಲ್ಲಿಯೂ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಈ ಬಾರಿ 64,85,980 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ  32,571 ಬೂತ್‍ಗಳನ್ನು ನಿರ್ಮಿಸಲಾಗಿದ್ದು,  51,918 ತಂಡಗಳು, 11,0351 ಲಸಿಕಾ ಕಾರ್ಯಕರ್ತರು, 7827 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. 2481 ಸಂಚಾರಿ ತಂಡ , ಟ್ರಾನ್ಸಿಲ್ ತಂಡ-4300 ಇದಕ್ಕಾಗಿ 96 ಲಕ್ಷ ಡೋಸ್ ಪೋಲಿಯೋ ಲಸಿಕೆ,  ಮಾರ್ಕರ್ ಪೆನ್ಸ್, ಪೋಸ್ಟರ್ಸ್,  ಬ್ಯಾನರ್ಸ್, ಜಾಥಾ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಸಮನ್ವಯ ನಡೆಸಲಾಗುತ್ತಿದೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ರೋಟರಿ, ಐಎಂಎಗಳ ನೆರವು ಪಡೆಯಲಾಗಿದೆ ಎಂದು ಅವರು ವಿವರಿಸಿದರು.

About the author

ಕನ್ನಡ ಟುಡೆ

Leave a Comment