ರಾಜ್ಯ ಸುದ್ದಿ

ಈ ವರ್ಷ ದ್ವಿತೀಯ ಪಿಯು ರಿಸಲ್ಟ್‌ ಒಂದು ವಾರ ಬೇಗ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನೂ ಡಿಜಿಟಲೀಕರಣಕ್ಕೆ ಒಳಪಡಿಸುವ ಮೂಲಕ ಮೌಲ್ಯಮಾಪನ ಕೇಂದ್ರಗಳಿಂದಲೇ ಅಂಕಗಳನ್ನು ಆನ್‌ಲೈನ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಿ ಫಲಿತಾಂಶವನ್ನು ಒಂದು ವಾರ ಬೇಗ ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಇದುವರೆಗೆ ಮೌಲ್ಯಮಾಪಕರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ಪ್ರತ್ಯೇಕವಾಗಿ ವಿದ್ಯಾರ್ಥಿಯ ಕೋಡ್‌ ನಂಬರ್‌ ಹಾಗೂ ಅಂಕಗಳನ್ನು ಓಎಂಆರ್‌ ಶೀಟ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಈ ರೀತಿ ಪ್ರತಿ ಮೌಲ್ಯಮಾಪನ ಕೇಂದ್ರಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವಿವರ ಕಳಿಸಿ, ಅಲ್ಲಿ ಅಂಕಗಳನ್ನು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಿದ ನಂತರ ಫಲಿತಾಂಶ ಪ್ರಕಟಿಸಲಾಗುತ್ತಿತ್ತು.

ಇನ್ನು ಮುಂದೆ, ಮೌಲ್ಯಮಾಪನದ ನಂತರ ಮೌಲ್ಯಮಾಪಕರೇ ನೇರವಾಗಿ ಅಂಕಗಳನ್ನು ಆನ್‌ಲೈನ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸುತ್ತಿದೆ. ಪ್ರತಿ ದಿನ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ ಮೌಲ್ಯಮಾಪಕರು ಸಂಜೆ ಕಂಪ್ಯೂಟರ್‌ನ ಮುಂದೆ ಕೂತು ಅಂಕಗಳನ್ನು ಆನ್‌ಲೈನ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಿದ್ದಾರೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ನೇರವಾಗಿ ಈ ಅಂಕಗಳು ರವಾನೆಯಾಗಲಿವೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಯಶಸ್ವೀ ಪ್ರಯೋಗ: ಕಳೆದ ವರ್ಷ ಜೂನ್‌-ಜುಲೈನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ಈ ಪ್ರಯೋಗ ನಡೆಸಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಯಶಸ್ವಿಯಾಗಿತ್ತು. ಈ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಅಂಕಗಳನ್ನು ನೇರವಾಗಿ ಆನ್‌ಲೈನ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಈ ಪೈಕಿ ಕೇವಲ 30 ಉತ್ತರ ಪತ್ರಿಕೆಗಳ ಅಂಕಗಳು ಮಾತ್ರ ಕಂಪ್ಯೂಟರ್‌ನಲ್ಲಿ ತಪ್ಪಾಗಿ ದಾಖಲಾಗಿದ್ದವು. 

ಲೋಪ ಸರಿಪಡಿಸಿಕೊಳ್ಳಲು ಅವಕಾಶ: ಒಂದು ವೇಳೆ ಅಂಕಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿಯೂ ಉಂಟಾಗುವ ಲೋಪಗಳನ್ನು ಸರಿಪಡಿಸಲು ಇಲಾಖೆಯು ಪರಿಹಾರವನ್ನೂ ಕಂಡುಕೊಂಡಿದೆ. ಒಮ್ಮೆ ಮೌಲ್ಯಮಾಪಕರು ಆನ್‌ಲೈನ್‌ನಲ್ಲಿ ಅಂಕಗಳನ್ನು ಅಪ್‌ಲೋಡ್‌ ಮಾಡಿದ ನಂತರ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರು ಒಮ್ಮೆ ಉತ್ತರ ಪತ್ರಿಕೆಗಳೊಂದಿಗೆ ಅಂಕಗಳನ್ನು ಪರಿಶೀಲಿಸಲಿದ್ದಾರೆ. 

‘ಒಂದು ವೇಳೆ ಯಾವುದೇ ದೋಷ ಅಥವಾ ಮಾರ್ಪಾಟುಗಳಿದ್ದಲ್ಲಿ ಕೇಂದ್ರದ ಮುಖ್ಯಸ್ಥರು ಸಂಬಂಧಪಟ್ಟ ಮೌಲ್ಯಮಾಪಕರಿಗೆ ಅದನ್ನು ವಾಪಸ್‌ ಕಳಿಸಲಿದ್ದಾರೆ. ಕೇವಲ ಮೌಲ್ಯಮಾಪಕರು ಮಾತ್ರ ತಾವು ಮಾಡಿದ ತಪ್ಪನ್ನು ಹುಡುಕಿ ಲೋಪ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ನಿರ್ದೇಶಕ ಡಾ.ಪಿ.ಸಿ. ಜಾಫರ್‌ ತಿಳಿಸಿದ್ದಾರೆ.

ಎರಡು ಹಂತದಲ್ಲಿ ಪರಿಶೀಲನೆ: ಫಲಿತಾಂಶದಲ್ಲಿ ಯಾವುದೇ ಗೊಂದಲ ಉಂಟಾಗುವುದನ್ನು ತಪ್ಪಿಸಲು ಎರಡು ಹಂತದಲ್ಲಿ ಅಂಕಗಳ ಪರಿಶೀಲನೆ ನಡೆಸಲಾಗುತ್ತದೆ. ಮೌಲ್ಯಮಾಪಕರು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಿದ ಅಂಕಗಳ ಜತೆಗೆ, ಓಎಂಆರ್‌ ಶೀಟ್‌ನಲ್ಲಿನ ಅಂಕಗಳನ್ನೂ ತಾಳೆ ನೋಡಿ ಪರಿಶೀಲಿಸಲಾಗುತ್ತದೆ. ಇದರಿಂದ ಕರಾರುವಕ್ಕಾದ ಫಲಿತಾಂಶ ಪ್ರಕಟಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ, ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಪ್ರತಿ ಮೌಲ್ಯಮಾಪನ ಕೇಂದ್ರಗಳಲ್ಲಿ ಕನಿಷ್ಟ 20 ಕಂಪ್ಯೂಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದೇನೂ ಕಷ್ಟದ ಕೆಲಸವಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಈ ಮೂಲಕ ಮೌಲ್ಯಮಾಪನ ಸಂದರ್ಭದಲ್ಲಿ ಕಾಗದದ ಕೆಲಸದ ಅವಧಿಯನ್ನು ಕಡಿತಗೊಳಿಸುವುದು ಕೂಡ ಇಲಾಖೆಯ ಮುಖ್ಯ ಉದ್ದೇಶವಾಗಿದೆ.

About the author

ಕನ್ನಡ ಟುಡೆ

Leave a Comment