ರಾಷ್ಟ್ರ ಸುದ್ದಿ

ಈ ಶೈಕ್ಷಣಿಕ ವರ್ಷದಿಂದ ನವೋದಯ ವಿದ್ಯಾಲಯಗಳಲ್ಲಿ 5 ಸಾವಿರ ಸೀಟುಗಳು ಹೆಚ್ಚಳ: ಸಚಿವ ಪ್ರಕಾಶ್ ಜಾವಡೇಕರ್

ನವದೆಹಲಿ: ಈ ಶೈಕ್ಷಣಿಕ ವರ್ಷದಿಂದ  ನವೋದಯ ವಿದ್ಯಾಲಯಗಳಲ್ಲಿ 5 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಇಂದು ಘೋಷಿಸಿದ್ದಾರೆ. ಪ್ರಸ್ತುತ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇರುವ ನವೋದಯ ವಿದ್ಯಾಲಯ , ವಸತಿ ಶಾಲೆಗಳಲ್ಲಿ 46600 ಸೀಟುಗಳಿವೆ. ಹೆಚ್ಚುವರಿಯಾಗಿ 5 ಸಾವಿರ ಸೀಟುಗಳನ್ನು  ಸೇರ್ಪಡೆ ಮಾಡಲಾಗಿದ್ದು, 2019ರಲ್ಲಿ  ಒಟ್ಟಾರೇ 51000 ಸೀಟುಗಳು ಲಭ್ಯವಾಗುತ್ತವೆ ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ವಿಸ್ತರಣೆಯಲ್ಲಿ ಇದು ಅತ್ಯಂತ ಸೂಕ್ತವಾದ ಕ್ರಮವಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ  ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ನವೋದಯ ವಿದ್ಯಾಲಯ ಹಾಗೂ ವಸತಿ ಶಾಲೆಗಳು ಹೆಚ್ಚಿನ ಅವಕಾಶ ನೀಡುತ್ತವೆ ಎಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿನ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 5000 ಸೀಟುಗಳ ಜೊತೆಗೆ  ಹೆಚ್ಚುವರಿಯಾಗಿ 9 ಸಾವಿರ ಸೀಟುಗಳನ್ನು  ಸೇರಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ  32000 ಹೆಚ್ಚಿನ ಸೀಟುಗಳನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಶೈಕ್ಷಣಿಕ ಸಾಲಿನ ಪ್ರವೇಶ ಪರೀಕ್ಷೆಗಾಗಿ 31. 10 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 2001ರಲ್ಲಿ 5.50 ಲಕ್ಷ ವಿದ್ಯಾರ್ಥಿಗಳು ಆರನೇ ತರಗತಿ ಪ್ರವೇಶಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದರು ಕಾಲಕ್ರಮೇಣ ಈ ಸಂಖ್ಯೆ ದ್ವಿಗುಣಗೊಂಡಿದೆ. ನವೋದಯ ಶಾಲೆಗಳಲ್ಲಿ ವ್ಯಾಸಂಗ ಮಾಡಿದ 10 ನೇ ತರಗತಿ ವಿದ್ಯಾರ್ಥಿಗಳ ಶೇ, 97 ರಷ್ಟು ಉತ್ತೀರ್ಣರಾಗುತ್ತಿದ್ದರೆ,  ಶೇ, 86 ರಷ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment