ರಾಜಕೀಯ

ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯ: ಶಾಸಕರ ಅಸಮಾಧಾನ

ಬೆಳಗಾವಿ: ಡಿಸೆಂಬರ್ 18ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಇದ್ದು, ಉತ್ತರ ಕರ್ನಾಟಕ ಭಾಗವನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಪಕ್ಷದ ಹೈಕಮಾಂಡ್ ತಮ್ಮ ಭಾಗವನ್ನು
ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ಸಭೆ ನಡೆಸಿರುವ ಅಸಮಾಧಾನಿತ ಶಾಸಕರು ಮುಂದಿನ ಸಂಪುಟ ವಿಸ್ತರಣೆಯಲ್ಲಿ ದಕ್ಷಿಣ ಕರ್ನಾಟಕದವರನ್ನು ಬಿಟ್ಟು ಉತ್ತರ ಕರ್ನಾಟಕದವರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದು ಈ ವಿಷಯವನ್ನು ಹೈಕಮಾಂಡ್ ಬಳಿಗೆ ತೆಗೆದುಕೊಂಡು ಹೋಗುವುದಾಗಿ ಮೂಲಗಳು ತಿಳಿಸಿವೆ.
ಜೊತೆಗೆ ಉತ್ತರ ಕರ್ನಾಟಕ ಶಾಸಕರು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ವಿರುದ್ಧವೂ ದೂರು ನೀಡಲು ನಿರ್ಧರಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ, ಉತ್ತರ ಕರ್ನಾಟಕ ಭಾಗದ ಶಾಸಕರು ಅನ್ಯಾಯದಿಂದ ಬಳಲುತ್ತಿದ್ದಾರೆ, ಉತ್ತರ ಕರ್ನಾಟಕ ಭಾಗದ ಜನರಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಎಂಬಿ ಪಾಟೀಲ್ ದೂರಿದ್ದಾರೆ.
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣಗಳಾಗಿದ್ದು, ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ 41 ಶಾಸಕ ಪೈಕಿ 5 ಸಚಿವ ಸ್ಥಾನ ಲಭ್ಯವಾಗಿದೆ. ಆದರೆ, ದಕ್ಷಿಣ ಕರ್ನಾಟಕದಲ್ಲಿ 36 ಶಾಸಕರ ಪೈಕಿ 9 ಸಚಿವ ಸ್ಥಾನ ಸಿಕ್ಕಿದೆ. ಉತ್ತರ ಕರ್ನಾಟಕಕ್ಕೆ ಆನ್ಯಾಯವಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ತಾರತಮ್ಯವನ್ನು ಕೂಡಲೇ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಪ್ರಮುಖ ಹುದ್ದೆಗಳು ಹಾಗೂ ಸರಕಾರದ ಹುದ್ದೆಗಳು ದಕ್ಷಿಣ ಕರ್ನಾಟಕ ಭಾಗದ ನಾಯಕರಿಗೆ ಸಿಕ್ಕಿದೆ. ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕಕ್ಕೂ ಮಹತ್ವ ನೀಡಬೇಕು. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಿಎಲ್‌ಪಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಅಂತೆಯೇ ಎಸ್. ಆರ್.ಪಾಟೀಲರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಭಾಪತಿ ಆಯ್ಕೆ ವಿಷಯದಲ್ಲಿ ಎಸ್‌.ಆರ್.ಪಾಟೀಲರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂಬಿಪಿ, ಎಸ್ ಆರ್‌ ಪಾಟೀಲ್ ಹಿರಿಯರು, ಬಹಳಷ್ಟು ಆಸೆ ಹೊಂದಿದ್ದರು. ಆದರೆ, ಪಕ್ಷದ ಕೆಲ ಮಾನದಂಡಗಳಿಂದ ಅವರಿಗೆ ಅವಕಾಶ ಕೈ ತಪ್ಪಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

About the author

ಕನ್ನಡ ಟುಡೆ

Leave a Comment