ರಾಷ್ಟ್ರ ಸುದ್ದಿ

ಉತ್ತರ ಪ್ರದೇಶದಲ್ಲೂ ಓಬಿಸಿ ಒಳಮೀಸಲು: ಯಾದವರು, ಕುರ್ಮಿಗಳಿಗೆ ಶೇ 7ರ ಕೋಟಾಗೆ ಶಿಫಾರಸು

ಲಖನೌ: ಇತರ ಹಿಂದುಳಿದ ಜಾತಿಗಳಿಗೆ ನಿಗದಿಯಾಗಿರುವ ಒಟ್ಟಾರೆ ಶೇ 27ರ ಮೀಸಲಾತಿಯನ್ನು ಸೂಕ್ತವಾಗಿ ಹಂಚಲು ಉತ್ತರ ಪ್ರದೇಶದ ಬಿಜೆಪಿ ಸರಕಾರ ರಚಿಸಿದ ನಾಲ್ವರು ಸದಸ್ಯರ ಸಾಮಾಜಿಕ ನ್ಯಾಯ ಸಮಿತಿ ತನ್ನ ವರದಿ ಸಿದ್ಧಪಡಿಸಿದ್ದು, ಅದರಂತೆ ಯಾದವರು ಮತ್ತು ಕುರ್ಮಿಗಳಿಗೆ ಶೇ 7ರ ಮೀಸಲು ನಿಗದಿಯಾಗುವ ಸಾಧ್ಯತೆಯಿದೆ.

ಈ ಎರಡು ಜಾತಿಗಳು ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲ ಆರ್ಥಿಕ ಮತ್ತು ರಾಜಕೀಯವಾಗಿಯೂ ಬಹಳಷ್ಟು ಪ್ರಭಾವಿಯಾಗಿವೆ. ಯಾದವರು ಸಮಾಜವಾದಿ ಪಕ್ಷದ ಪ್ರಮುಖ ಮತದಾರರಾಗಿದ್ದು, ಕುರ್ಮಿಗಳು ಬಿಜೆಪಿಯ ಮಿತ್ರಪಕ್ಷವಾದ ಅಪ್ನಾ ದಲ್ ಮತದಾರರಾಗಿದ್ದಾರೆ.

ನ್ಯಾಯಮೂರ್ತಿ ರಾಘವೇಂದ್ರ ಕುಮಾರ್ ಅಧ್ಯಕ್ಷತೆಯ ಸಮಿತಿ ಓಬಿಸಿಗಳನ್ನು 79 ಉಪ ಜಾತಿಗಳಾಗಿ ವರ್ಗೀಕರಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಬಿಜೆಪಿ ಮಿತ್ರಪಕ್ಷ ಎಸ್‌ಬಿಎಸ್‌ಪಿ ವರಿಷ್ಠ ಓಂ ಪ್ರಕಾಶ್‌ ರಾಜ್‌ಭರ್ ಈ ವರದಿಯನ್ನು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ. ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸದಿದ್ದರೆ ಡಿಸೆಂಬರ್ 24ರಿಂದ ದೇಶವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿಯೂ ರಾಜ್‌ಭರ್ ಎಚ್ಚರಿಕೆ ನೀಡಿದ್ದಾರೆ. ಲೋಧ್‌, ಕುಶ್ವಾಹ ಮತ್ತು ತೇಲಿ ಸೇರಿದಂತೆ ಅತ್ಯಂತ ಹಿಂದುಳಿದ ಜಾತಿಗಳಿಗೆ ಹೆಚ್ಚಿನ ಲಾಭ ದೊರೆಯುವಂತಾಗಲು ಶೇ 11ರ ಮೀಸಲು ಒದಗಿಸಲು ಉತ್ತರ ಪ್ರದೇಶ ಸರಕಾರ ಉದ್ದೇಶಿಸಿದೆ.

400 ಪುಟಗಳ ಈ ವರದಿಯಲ್ಲಿ (ಟೈಮ್ಸ್ ಆಫ್‌ ಇಂಡಿಯಾಗೆ ಅದರ ಪ್ರತಿ ಲಭ್ಯವಾಗಿದೆ) ಅತ್ಯಂತ ಹಿಂದುಳಿದ ಜಾತಿಗಳಿಗೆ ಅವರ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಉದ್ಯೋಗದಲ್ಲಿ ಮೀಸಲು ಸೌಲಭ್ಯ ಸಿಗಬೇಕು ಎಂದು ಶಿಫಾರಸು ಮಾಡಿದೆ. ಉದಯೋನ್ಮುಖ ಮಧ್ಯಮ ವರ್ಗ ಎಂದು (ಉಪ ವರ್ಗೀಕರಣ) ವರ್ಗೀಕರಿಸಿರುವ ಕೆಲವು ಉಪ ಜಾತಿಗಳನ್ನೂ ವರದಿಯಲ್ಲಿ ಸೇರಿಸಲಾಗಿದೆ.

ರಾಜ್‌ಭರ್‌, ಘೋಸಿ ಮತ್ತು ಖುರೇಶಿ (ಮುಸ್ಲಿಮರ ಪಂಗಡ) ಗಳಿಗೆ ಶೇ 9ರ ಮೀಸಲು ಒದಗಿಸುವ ಪ್ರಸ್ತಾಪವಿದೆ. ಈ ಸಮುದಾಯದವರು ಬಹುತೇಕ ಕ್ಲಾಸ್‌-3 ಅಥವಾ ಕ್ಲಾಸ್‌-4 ವರ್ಗದ ಉದ್ಯೋಗಗಳನ್ನು ಮಾಡುತ್ತಾರೆ ಅಥವಾ ನಿರುದ್ಯೋಗಿಗಳಾಗಿಯೇ ಇದ್ದಾರೆ ಎಂದು ವರದಿ ಹೇಳಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಓಬಿಸಿಯಲ್ಲಿ ಒಳಮೀಸಲು ಕಲ್ಪಿಸಲು ಕಳೆದ ಜೂನ್‌ನಲ್ಲಿ ಈ ಸಮಿತಿ ನೇಮಿಸಿದ್ದರು. ಎಸ್‌ಪಿ ಮತ್ತು ಬಿಎಸ್‌ಪಿ ಸೇರಿದಂತೆ ಮಹಾಮೈತ್ರಿಕೂಟವನ್ನು ಎದುರಿಸಲು ಬಿಜೆಪಿ ಈ ಮೆಗಾ ಯೋಜನೆಗೆ ಕೈಹಾಕಿದೆ.

About the author

ಕನ್ನಡ ಟುಡೆ

Leave a Comment