ರಾಜಕೀಯ

ಉಪಚುನಾವಣೆ ಅಂತ್ಯ: ಸಂಪುಟ ವಿಸ್ತರಣೆ ಮಾತೇ ಇಲ್ಲ, ಕಾದು ಕುಳಿತಿದ್ದಾರೆ ಸಚಿವಾಕಾಂಕ್ಷಿ ಶಾಸಕರು

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂದು ಕುತೂಹಲದಿಂದ ಎದು ನೋಡುತ್ತಿರುವ ಸಚಿವಾಕಾಂಕ್ಷಿ ಶಾಸಕರಿಗೆ ಮತ್ತೆ ಭಾರಿ ನಿರಾಸೆಯುಂಟಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಉಪಚುನಾವಣೆ ಅಂತ್ಯಗೊಂಡ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆಂದು ಹೇಳಿದ್ದ ನಾಯಕರು ಇದೀಗ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಪಕ್ಷದ ವಿರುದ್ಧ ಬಂಡಾಯವೇಳುವ ಹಂತಕ್ಕೂ ತಲುಪಿದ್ದರು. ಬಳಿಕ ಪಕ್ಷದ ಹಿರಿಯ ನಾಯಕರು ಅವರನ್ನು ಸಮಾಧಾನಪಡಿಸಿ, ಶೀಘ್ರದಲ್ಲಿಯೇ ಸಚಿವ ಸ್ಥಾನ ನೀಡುವುದಾಗಿ ಸಮಾಧಾನಪಡಿಸಿದ್ದರು. ಆದರೆ, ಸಂಪುಟ ವಿಸ್ತರಣೆ ಕಾರ್ಯವನ್ನು ಪದೇ ಪದೇ ಸರ್ಕಾರ ಮುಂದೂಡುತ್ತಲೇ ಇದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕೂಡ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವಂತೆ ಸೂಡಿಸಿದ್ದರು. ಉಪ ಚುನಾವಣೆ ಪೂರ್ಣಗೊಂಡ ಬಳಿಕ ಮಂತ್ರಿಯಾಗುತ್ತೇವೆಂದು ಶಾಸಕರು ಕಾದು ಕುಳಿತಿದ್ದಾರೆ. ಆದರೆ, ಪ್ರಸ್ತುತ ಅದು ಅಸಾಧ್ಯ ಎಂಬ ವಾತಾವರಣಗಳು ಕಾಣಿಸತೊಡಗಿವೆ.
ಈ ನಡುವೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ. ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗ್ರೀನ್ ಸಿಗ್ನಲ್ ನೀಡಬೇಕು. ಆದರೆ, ಅವರು ಚುನಾವಣೆ ನಡೆಯುವ ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಪಂಚರಾಜ್ಯಗಳ ಚುನಾವಣೆ ಪೂರ್ಣಗೊಳ್ಳುವವರೆಗೂ ರಾಜ್ಯ ಸಂಪುಟ ವಿಸ್ತರಣೆಯಾಗುವುದು ಅನುಮಾನವೆಂದು ಹೇಳಲಾಗುತ್ತಿದೆ. ಹೀಗಾಗಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಮೂಡಿದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಪ್ರಸ್ತುತ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳಿಗೂ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕಿದು ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಉಳಿದ ಎಲ್ಲಾ ಕೆಲಸಗಳನ್ನು ಬದಿಗೆ ಸರಿಸಿ, ಚುನಾವಣೆ ನಡೆಯುವ ರಾಜ್ಯಗಳಲ್ಲಿ ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಸಂಸದೀಯ ಸಭೆಯನ್ನು ನಡೆಸಲಾಗಿತ್ತು. ಈ ವೇಳೆ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಯಾವುದೇ ಸಮಯದಲ್ಲಿ ಹೈಕಮಾಂಡ್ ನಿಂದ ದೂರವಾಣಿ ಕರೆ ಬರಬಹುದು ಎಂದು ನಿರೀಕ್ಷಿಸಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸುವ ಆಶಾಭಾವವನ್ನು ಹೊಂದಿದ್ದೇವೆಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 6 ಮತ್ತು ಜೆಡಿಎಸ್ ಪಕ್ಷಕ್ಕೆ 2 ಸಚಿವ ಸ್ಥಾನಗಳು ಸಿಗಲಿವೆ. ಉಪಚುನಾವಣೆಗೂ ಮುನ್ನ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ನಾಯಕರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧರಿಸಿತ್ತು. ಕೆಲ ನಾಯಕರಿಗೆ ಸಚಿವ ಸ್ಥಾನ ನೀಡುತ್ತೇವೆಂದು ಹೇಳಿ ಸಮಾಧಾನ ಕೂಡ ಪಡಿಸಿತ್ತು. ಉಪಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲು ಕಂಡ ಹಿನ್ನಲೆಯಲ್ಲಿ ಬಂಡಾಯ ನಾಯಕರು ಇದೀಗ ತಣ್ಣಗಾಗಿದ್ದಾರೆ. ಹೀಗಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ತ್ವರಿತಗತಿಯಲ್ಲಿ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ನಾಯಕರು ಕಾರ್ಯನಿರತರಾಗಿರುವುದರಿಂದ ಚುನಾವಣೆ ಪೂರ್ಣಗೊಂಡ ಬಳಿಕ ಡಿಸೆಂಬರ್ ತಿಂಗಳಿನಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

About the author

ಕನ್ನಡ ಟುಡೆ

Leave a Comment