ರಾಷ್ಟ್ರ ಸುದ್ದಿ

ಎನ್ ಡಿಎ ಸಚಿವರ ವಿದೇಶ ಪ್ರವಾಸಕ್ಕೆ ಖರ್ಚಾಗಿದ್ದು 239.05 ಕೋಟಿ ರೂ.: ಆರ್ ಟಿಐ ಮಾಹಿತಿ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದ ಸಚಿವರು ವಿದೇಶ ಪ್ರವಾಸಕ್ಕೆ ಸುಮಾರು 239.05 ಕೋಟಿ ರೂ ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಹಕ್ಕು ಅರ್ಜಿಯ ಮೂಲಕ ಈ ಮಾಹಿತಿ ದೊರೆತಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ವರೆಗೂ ಪ್ರಧಾನಿ ಮೋದಿ ಅವರನ್ನು ಹೊರತು ಪಡಿಸಿ ಎನ್ ಡಿಎ ಸಚಿವರ ವಿದೇಶ ಪ್ರವಾಸಕ್ಕೆ ಸುಮಾರು 239.05 ಕೋಟಿ ರೂಗಳನ್ನು ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ. ಆರ್ ಟಿಐ ಕಾರ್ಯಕರ್ತರೊಬ್ಬರು ಸಲ್ಲಿಕೆ ಮಾಡಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಪಾವತಿ ಮತ್ತು ಖಾತೆಗಳು, ಕ್ಯಾಬಿನೆಟ್ ವ್ಯವಹಾರಗಳ ಕಾರ್ಯಾಲಯ ಈ ಅರ್ಜಿಗೆ ಉತ್ತರ ನೀಡಿದೆ. ಕಾರ್ಯಾಲಯ ನೀಡಿರುವ ಉತ್ತರದ ಅನ್ವಯ ಏಪ್ರಿಲ್ 1, 2014 ರಿಂದ ಮಾರ್ಚ್ 31 2018ರವರೆಗೂ 25 ಕೇಂದ್ರ ಸಚಿವರು, 45 ರಾಜ್ಯಖಾತೆ ಸಚಿವರು ಮತ್ತು 11 ಮಂದಿ ಸ್ವತಂತ್ರ ಖಾತೆ ಸಚಿವರ ವಿದೇಶ ಪ್ರವಾಸಕ್ಕೆ 239.05 ಕೋಟಿ ರೂಗಳು ಖರ್ಚಾಗಿದೆ.
ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಖರ್ಚಾಗಿದ್ದು 2,021.58 ಕೋಟಿ
ಇನ್ನು ಈ ಹಿಂದೆ ಅಂದರೆ ಕಳೆದ ಡಿಸೆಂಬರ್ 13ರಂದು ರಾಜ್ಯಸಭೆ ಕೇಂದ್ರ ಸಚಿವ ವಿಕೆ ಸಿಂಗ್ ಅವರು ನೀಡಿದ್ದ ಮಾಹಿತಿಯಂತೆ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಕ್ಕೆ 2,021.58 ಕೋಟಿ ರೂಗಳು ಖರ್ಚಾಗಿತ್ತು. ಏಪ್ರಿಲ್ 1, 2014 ರಿಂದ ಈ ವರೆಗೂ ಪ್ರಧಾನಿ ಮೋದಿ ಸುಮಾರು 48 ವಿದೇಶ ಪ್ರವಾಸ ಕೈಗೊಂಡಿದ್ದು, ಇದಕ್ಕಾಗಿ 2,021.58 ಕೋಟಿ ರೂಗಳು ಖರ್ಚಾಗಿದೆ,. ಈ ಪೈಕಿ ಪ್ರಧಾನಿ ಮೋದಿ ಆವರ ವಿಮಾನದ ನಿರ್ವಹಣೆ, ಭದ್ರತೆ, ಚಾರ್ಟೆಡ್ ವಿಮಾನ ವೆಚ್ಚ ಮತ್ತು ಸುರಕ್ಷಿತ ಹಾಟ್ ಲೈನ್ ವೆಚ್ಚಗಳೂ ಸೇರಿವೆ ಎಂದು ವಿಕೆ ಸಿಂಗ್ ಮಾಹಿತಿ ನೀಡಿದ್ದರು.

About the author

ಕನ್ನಡ ಟುಡೆ

Leave a Comment