ರಾಜಕೀಯ

ಎಸ್ಪಿ,ಬಿಎಸ್ಪಿ ಮೈತ್ರಿ ಅಮಿತ್ ಶಾ, ಮೋದಿ ನಿದ್ದೆಗೆಡಿಸಲಿದೆ : ಮಾಯಾವತಿ

ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಜೊತೆಯಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ನಿರ್ಧರಿಸಿವೆ. 38 ಕ್ಷೇತ್ರಗಳಲ್ಲಿ ಬಿಎಸ್ಪಿ, 38 ಕ್ಷೇತ್ರಗಳಲ್ಲಿ ಎಸ್ಪಿ ಸ್ಪರ್ಧಿಸಲು ನಿರ್ಧರಿಸಿದ್ದು, ಎರಡು ಕ್ಷೇತ್ರಗಳನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಪರೋಕ್ಷವಾಗಿ  ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಡಲಾಗಿದೆ.
ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಮುಂಬರುವ ಲೋಕಸಭಾ ಚುನಾವಣೆಯನ್ನು ಎಸ್ಪಿ, ಬಿಎಸ್ಪಿ ಜೊತೆಯಾಗಿ ಎದುರಿಸಲಿದ್ದು, ದೇಶದಲ್ಲಿ ಹೊಸ ರಾಜಕೀಯ ಕ್ರಾಂತಿಯಾಗಲಿದೆ.ಇದು ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿದ್ದೆಗೆಡಿಸಲಿದೆ ಎಂದರು.

ಎಸ್ಪಿ , ಬಿಸ್ಪಿ ಜೊತೆಗಿನ ಮೈತ್ರಿ ಇದೇ ಮೊದಲಲ್ಲ. 1990ರ ಹಿಂದೆಯೇ  ಕೋಮುವಾದಿ ಬಿಜೆಪಿಯನ್ನು ಸೋಲಿಸಲು  ಕಾನ್ಪಿರಾಂ ಹಾಗೂ ಮುಲಾಯಂ ಸಿಂಗ್ ಯಾದವ್  ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿಸಿದರು. ಆ ಮೈತ್ರಿ ಬಹಳ ಕಾಲದವರೆಗೂ ಮುಂದುವರೆಯಲಿಲ್ಲ. ಆದರೆ, ಈಗ ಅದೇ ಸಿದ್ಧಾಂತ ಹಾಗೂ ಚಿಂತನೆಗಳೊಂದಿಗೆ ಜೊತೆಯಾಗಿ ಚುನಾವಣೆಯನ್ನು ಎದುರಿಸುವುದಾಗಿ  ತಿಳಿಸಿದರು.ಬಿಜೆಪಿಯ ಸುಳ್ಳಿನ ಭರವಸೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಎದುರಿಸಲು ನಿರ್ಧರಿಸಿದ್ದು, ಇದು ದೇಶದ ರಾಜಕೀಯದಲ್ಲಿ ಹೊಸ ಕ್ರಾಂತಿ ಉಂಟುಮಾಡಲಿದೆ ಎಂದು ಮಾಯಾವತಿ ಹೇಳಿದರು.ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳ ನೀತಿಗಳ ಹೆಚ್ಚುಕಡಿಮೆ ಒಂದೇ ಆಗಿವೆ. ರಕ್ಷಣಾ ಒಪ್ಪಂದದ ಭ್ರಷ್ಟಾಚಾರದಲ್ಲಿ ಉಭಯ ಪಕ್ಷಗಳು ತೊಡಗಿರುವುದನ್ನು ನಾವು ನೋಡುತ್ತಿದ್ದೇವೆ. ಕಾಂಗ್ರೆಸ್ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿತ್ತು. ಇಂದು ಅಘೋಷಿತ ತುರ್ತುಪರಿಸ್ಥಿತಿಯ ಪರಿಸ್ಥಿತಿ ಇದೆ ಎಂದು ಮಾಯಾವತಿ ಆರೋಪಿಸಿದರು.

About the author

ಕನ್ನಡ ಟುಡೆ

Leave a Comment